ಮೂಡಲಗಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯಿಂದ ಸಮಾಜದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗುವ ಅನುಕೂಲಗಳ ಬಗ್ಗೆ ಸಮಾಜದ ಎಲ್ಲ ಜನರಿಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ಶ್ರೀಗಳು ಪಂಚಮಸಾಲಿ ಪ್ರತಿಜ್ಞಾ ಪಂಚಾಯತ ಎಂಬ ಕಾರ್ಯಕ್ರಮದ ಮೂಲಕ ಅರಭಾವಿ ಮತಕ್ಷೇತ್ರದ ವ್ಯಾಪ್ತಿಯ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಲಿದ್ದಾರೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಬೆಳಗಾವಿ ಜಿಲ್ಲಾ ಕಾರ್ಯಾಧ್ಯಕ್ಷ ಎಂದು ನಿಂಗಪ್ಪ ಪಿರೋಜಿ ಹೇಳಿದರು.
ಸೋಮವಾರದಂದು ಪಟ್ಟಣದ ಪ್ರೆಸ್ ಕಬ್ಲ್‍ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿಗಾಗಿ ಸಾಕಷ್ಟು ರೀತಿಯ ಹೋರಾಟಗಳನ್ನು ಮಾಡಿದರು ಕೂಡ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಬಿಜೆಪಿ ಸರ್ಕಾರದ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಹಾಗೂ ಯಡಿಯೂರಪ್ಪನವರು ಪಂಚಮಸಾಲಿಗಳಿಗೆ 2ಎ ಮೀಸಲಾತಿ ಕೊಡುತ್ತೇವೆ ಎಂದು ಸುಳ್ಳು ಹೇಳಿ ವಚನಭ್ರಷ್ಟರಾಗಿದ್ದಾರೆ, ಆದರಿಂದ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಲು ನಾವು ಎಲ್ಲರೂ ಶ್ರೀಗಳಿಗೆ ಬೆಂಬಲ ಸೂಚಿಸಿ ಧ್ವನಿ ಎತ್ತಬೇಕು ಎಂದರು.
ಸಂಘಟನೆಯ ತಾಲೂಕಾಧ್ಯಕ್ಷ ಸಂಗಮೇಶ ಕೌಜಲಗಿ ಮಾತನಾಡಿ, ಶ್ರೀಗಳು ಸೆ.28 ರಿಂದ ಅ.6ರವರೆಗೂ ಅರಭಾವಿ ಮತಕ್ಷೇತ್ರದ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿಯ ಪಂಚಮಸಾಲಿ ಸಮಾಜದ ಜನರೊಂದಿಗೆ 2ಎ ಮೀಸಲಾತಿ ಬಗ್ಗೆ ಸಂವಾದ ನಡೆಸಿ ಜನರಿಗೆ ಮೀಸಲಾತಿ ಬಗ್ಗೆ ಜಾಗೃತಿ ಮೂಡಿಸುವಂತ ಕಾರ್ಯಕ್ರಮದೊಂದಿಗೆ ಹಳ್ಳಿಗಳಿಗೆ ಭೇಟಿ ನೀಡಲಿದ್ದು, ಸಮಾಜದ ಬಾಂಧವರು ಶ್ರೀಗಳ ಕಾರ್ಯಕ್ರಮದಲ್ಲಿ ಭಾಗವಹಿಸಿಬೇಕೆಂದು ಹೇಳಿದ ಅವರು, ಹಳ್ಳಿಗಳ ಭೇಟಿ ಕಾರ್ಯಕ್ರಮವನ್ನು ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಅದ್ದೂರಿಯಾಗಿ ಉದ್ಘಾಟನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮೀಸಲಾತಿ ಹಕ್ಕೋತ್ತಾಯ ಸಮಿತಿಯ ಅಧ್ಯಕ್ಷ ಮಲ್ಲು ಗೋಡಿಗೌಡರ, ದೀಪಕ್ ಜುಂಜರವಾಡ, ಕಲ್ಲೇಶ ಗೋಕಾಕ ಇದ್ದರು.