ಅರಭಾವಿ ಕ್ಷೇತ್ರದಲ್ಲಿ ಪಂಚಮಸಾಲಿಗಳ 2ಎ ಮೀಸಲಾತಿ ಅಭಿಯಾನ ಯಶಸ್ವಿ-ಪಿರೋಜಿ
ಮೂಡಲಗಿ : ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಮೂಡಲಗಿ ತಾಲೂಕಾ ಮತ್ತು ಅರಭಾವಿ ಕ್ಷೇತ್ರದಲ್ಲಿ ಜರುಗಿದ ಪಂಚಮಸಾಲಿಗಳ 2ಎ ಮೀಸಲಾತಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸುವ ಮೂಲಕ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿ ಸಮಾವೇಶ ಯಶಸ್ವಿಗೊಳಿಸಿ ಒಗ್ಗಟ್ಟನ್ನು ತೋರಿದ ಕಾರ್ಯದಿಂದ ಶ್ರೀಗಳ ಕೈ ಮತ್ತಷ್ಟು ಬಲ ಪಡಿಸಿದಂತಾಗಿದೆ ಎಂದು ಪಂಚಮಸಾಲಿ ಸಂಘಟನೆಯ ಜಿಲ್ಲಾ ಕಾರ್ರ್ಯಾಧ್ಯಕ್ಷ ನಿಂಗಪ್ಪ ಪಿರೋಜಿ ಹೇಳಿದರು.
ಸೋಮವಾರ ಪಟ್ಟಣದ ಪತ್ರಿಕಾ ಕಾರ್ಯಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜದ ಏಳಿಗೆಗಾಗಿ ಹಾಗೂ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ 2ಎ ಮೀಸಲಾತಿ ನೀಡಬೇಕೆನ್ನುವ ಉದ್ದೇಶದಿಂದ ಕೂಡಲಸಂಗಮ ಶ್ರೀಗಳು ಸಾಕಷ್ಟು ಹೋರಾಟಗಳನ್ನು ಮಾಡುತ್ತಿದ್ದು ಅವರ ಹೋರಾಟಕ್ಕೆ ಮೂಡಲಗಿ ತಾಲೂಕಿನ ಮತ್ತು ಅರಬಾವಿ ಮತ ಕ್ಷೇತ್ರದಲ್ಲಿನ ಪಂಚಮಸಾಲಿಗಳು ಉತ್ತಮ ಬೆಂಬಲ ನೀಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ ಎಂದರು.
ಶ್ರೀಗಳು ತಾಲೂಕಿನ ಹಳ್ಳೂರ ಗ್ರಾಮದಿಂದ ಅಭಿಯಾನ ಪ್ರಾರಂಭಿಸಿ ಹಳ್ಳಿ ಹಳ್ಳಿಗಳ ಭೇಟಿಯಿಂದ ಜನತೆಗೆ ಶಕ್ತಿ ದೊರಕಿದಂತಾಗಿದ್ದು ಮೀಸಲಾತಿ ದೊರಕುವ ಕಾಲ ಸನ್ನಿಹಿತವಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಸಾಮಾಜಿಕ ಜಾಲತಾಣದ ಅಧ್ಯಕ್ಷ ದೀಪಕ್ ಜುಂಜರವಾಡ, ಮೂಡಲಗಿ ತಾಲೂಕಾಧ್ಯಕ್ಷ ಬಸವರಾಜ ಪಾಟೀಲ, ಯುವ ಘಟಕದ ಅಧ್ಯಕ್ಷ ಸಂಗಮೇಶ ಕೌಜಲಗಿ, ಮೀಸಲಾತಿ ಹೋರಾಟ ಸಮಿತಿ ತಾಲೂಕಾ ಅಧ್ಯಕ್ಷ ಮಲ್ಲು ಗೋಡಿಗೌಡರ, ಹಣಮಂತ ಶಿವಾಪೂರ ಇದ್ದರು.