ಮಕ್ಕಳಲ್ಲಿ ಸಾಹಿತ್ಯ, ಸಂಗೀತದ ಅಭಿರುಚಿ ಬೆಳೆಸಬೇಕು
ಮೂಡಲಗಿ: ‘ಸ್ವರ, ರಾಗ, ಲಯ, ಭಾವ ಹಾಗೂ ಶೃತಿಗಳ ಸಮನ್ವಯತೆಯ ಸಂಗೀತವು ಮನುಷ್ಯನ ಜೀವನೋತ್ಸಾಹವನ್ನು ವೃದ್ಧಿಸುವ ಶಕ್ತಿಯನ್ನು ಹೊಂದಿದೆ’ ಎಂದು ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀಧರಬೋಧ ಸ್ವಾಮೀಜಿ ಹೇಳಿದರು.
ಮೂಡಲಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಜ್ಞಾನ ದೀಪ್ತಿ ಸಾಹಿತ್ಯ ಪ್ರತಿಷ್ಠಾನದ ಸಹಯೋಗದಲ್ಲಿ ಬೆಳದಿಂಗಳ ಸಾಹಿತ್ಯ ಚಿಂತನ, ಮಂಥನ ತಿಂಗಳ ಕಾರ್ಯಕ್ರಮದ ಅಡಿಯಲ್ಲಿ ಏರ್ಪಡಿಸಿದ್ದ ಸಾಹಿತ್ಯ ಮತ್ತು ಸಂಗೀತ ಕಾರ್ಯಕ್ರಮವನ್ನು ತಬಲಾ ವಾದ್ಯವನ್ನು ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಭಾಷೆಯ ಪರೀದಿಯನ್ನು ಮೀರಿ ಸಂಗೀತವು ವಿಸ್ತಾರಗೊಂಡಿದೆ ಎಂದರು.
ಸಾಹಿತ್ಯದ ಓದು ಇಂದಿನ ಅವಶ್ಯಕತೆಯಾಗಿದ್ದು, ಮಕ್ಕಳಲ್ಲಿ ಸಾಹಿತ್ಯ ಮತ್ತು ಸಂಗೀತದ ಅಭಿರುಚಿಯನ್ನು ಬೆಳೆಸುವುದು ಅವಶ್ಯವಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಎಲೆಮರೆಯ ಕಾಯಿಗಳಂತೆ ಇರುವ ಯುವ ಸಂಗೀತ ಪ್ರತಿಭೆಗಳನ್ನು ಹೊರಗೆ ತರುವಂತ ಕಾರ್ಯ ಇದಾಗಿದೆ. ಇದೇ ನವಂಬರ್ ಮೊದಲ ವಾರದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಸಾಹಿತ್ಯ ಪರಿಷತ್‍ದಿಂದ ಉದಯೋನ್ಮುಖ ಕವಿಗಳ ಕವಿಗೋಷ್ಠಿ ಏರ್ಪಡಿಸಲಾಗಿದೆ ಎಂದರು.
ಎ.ಆರ್. ಕುರಬರ, ಶಿವಾನಂದ ಬಿದರಿ, ಮಾರುತಿ ಗೌಡರ, ನಿಂಗಮ್ಮ ಪಾಟೀಲ, ಲತಾ ತಳವಾರ, ಕಲ್ಪನಾ ಕನಕಿಕೋಡಿ, ಪ್ರಾರ್ಥನಾ ಗುಬಚಿ, ಸರೋಜಿನಿ ಬಡಿಗೇರ, ಸಿದ್ದಾರೂಢ ವಡರಟ್ಟಿ, ಕುಮಾರಿ ಆಲಗೂರ ಇವರು ಸಂಗೀತ ಪ್ರಸ್ತುತಪಡಿಸಿದರು. ಅಪ್ಪಣ್ಣ ಮುಗಳಖೋಡ ತಬಲಾ ಸಾಥ್, ಶ್ರೀಧರ ಪಿರೋಜಿ ಹಾರ್ಮೋನಿಯಂ ಸಾಥ ನೀಡಿದರು.
ಅನ್ನದಾಸೋಹಿ ಮಹಾಂತೇಶ ಹೊಸೂರ ಅವರನ್ನು ಗೌರವಿಸಿದರು.
ಕಸಾಪ ಪದಾಧಿಕಾರಿಗಳಾದ ಬಿ.ವೈ. ಶಿವಾಪುರ, ಎ.ಎಚ್. ವಂಟಗೂಡಿ, ಬಿ.ಆರ್. ತರಕಾರ ಹಾಗೂ ಪ್ರೊ. ಸಂಗಮೇಶ ಗುಜಗೊಂಡ, ಬಾಲಶೇಖರ ಬಂದಿ, ಡಾ. ಮಹಾದೇವ ಜಿಡ್ಡಿಮನಿ, ಸಿದ್ರಾಮ್ ದ್ಯಾಗಾನಟ್ಟಿ, ಡಾ. ಗೌಡರ, ಡಾ. ಮಹಾದೇವ ಪೋತರಾಜ, ವೆಂಕಟೇಶ ಸೋನವಾಲಕರ, ನಿಂಗಪ್ಪ ಪಿರೋಜಿ, ಸಂಜಯ ಮೋಕಾಸಿ ಪುಲಕೇಶ ಸೋನವಾಲಕರ, ಶ್ರೀಶೈಲ್ ಲೋಕನ್ನವರ ಇದ್ದರು.
ಸುರೇಶ ಲಂಕೆಪ್ಪನ್ನವರ ನಿರೂಪಿಸಿದರು.