‘ಚಿತ್ರಕಲೆಯು ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುತ್ತದೆ’
ಮೂಡಲಗಿ: ‘ಮಕ್ಕಳಲ್ಲಿ ಸೃಜಶೀಲತೆಯನ್ನು ಬೆಳೆಸುವಲ್ಲಿ ಚಿತ್ರಕಲೆಯು ಅತ್ಯಂತ ಪರಿಣಾಮಕಾರಿ ಮಾಧ್ಯಮವಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ್ ಮನ್ನಿಕೇರಿ ಹೇಳಿದರು.
ಇಲ್ಲಿಯ ಮೇಘಾ ಪ್ರೌಢ ಶಾಲೆಯಲ್ಲಿ ಜರುಗಿದ ಮೂಡಲಗಿ ತಾಲ್ಲೂಕು ಮಟ್ಟದ ಚಿತ್ರಕಲಾ ಶಿಕ್ಷಕರ ಎರಡು ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಶಾಲಾ ಪಠ್ಯಗಳೊಂದಿಗೆ ಚಿತ್ರಕಲೆಯು ಸಹ ಮಕ್ಕಳ ಬೆಳವಣಿಗೆಗೆ ಪೂರಕವಾಗಿದೆ ಎಂದರು.
ಮುಖ್ಯ ಅತಿಥಿ ಸಾಹಿತಿ ಬಾಲಶೇಖರ ಬಂದಿ ಮಾತನಾಡಿ ಚಿತ್ರಕಲೆಯು ವಿಶ್ವ ಭಾಷೆಯಾಗಿದೆ. ಮಕ್ಕಳ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಚಿತ್ರಕಲೆಯು ಪ್ರಮುಖ ಪಾತ್ರವಹಿಸುತ್ತದೆ ಎಂದರು.
ಲಲಿತ ಕಲೆಗಳಲ್ಲಿಯೇ ಸಂಗೀತದಂತೆ ಚಿತ್ರಕಲೆಯು ಸಹ ಜನರನ್ನು ತಲುಪುವ ಪ್ರಮುಖ ಕಲೆಯೆನಿಸಿದೆ. ಸಾವಿರ ಪದಗಳು ಹೇಳುವುದನ್ನು ಒಂದು ಚಿತ್ರ ಹೇಳುತ್ತದೆ. ಚಿತ್ರಕಲೆ ಉಳಿಯಬೇಕು. ಚಿತ್ರಕಲೆಗೆ ಪ್ರೋತ್ಸಾಹ ನೀಡುವ ಮೂಲ ಅದನ್ನು ಬೆಳೆಸುವುದು ಅವಶ್ಯವಿದೆ ಎಂದರು.
ಕೌಶಲ ಆಧಾರಿತ ಹೊಸ ಶಿಕ್ಷಣ ನೀತಿಯಲ್ಲಿ ಚಿತ್ರಕಲೆಗೆ ಪ್ರಾಮುಖ್ಯಕತೆ ಇದೆ. ಹೀಗಿದ್ದೂ ಸರ್ಕಾರವು ಚಿತ್ರಕಲಾ ಶಿಕ್ಷಕರನ್ನು ನೇಮಕ ಮಾಡದಿರುವುದು ವಿಷಾದಿಸುವ ಸಂಗತಿಯಾಗಿದೆ. ಖಾಲಿ ಇರುವ ಚಿತ್ರಕಲಾ ಶಿಕ್ಷಕರನ್ನು ನೇಮಕ ಮಾಡುವ ಪ್ರಕ್ರಿಯೆ ನಡೆಯಬೇಕು ಎಂದರು.
ಚಿಕ್ಕೋಡಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಎ. ದೇವಋಷಿ ಮಾತನಾಡಿ ಚಿತ್ರಕಲಾ ಶಿಕ್ಷಕರಿಗೆ ಉಳಿದ ಶಿಕ್ಷಕರಿಗೆ ದೊರೆಯುವಂತ ಸ್ಥಾನಾಮಾನ ದೊರೆಯುತ್ತಿಲ್ಲ. ಚಿತ್ರಕಲಾ ಶಿಕ್ಷಕರು ವಿದ್ಯಾರ್ಥಿಗಳ ಹೃದಯಲ್ಲಿ ಶಾಶ್ವತವಾಗಿ ಉಳಿದುಕೊಂಡಿರುತ್ತೇವೆ ಎಂದರು.
ಎರಡು ದಿನ ಜರುಗಿದ ಕಾರ್ಯಾಗಾರದಲ್ಲಿ ತಾಲ್ಲೂಕಿನ 21 ಚಿತ್ರಕಲಾ ಶಿಕ್ಷಕರು ಭಾಗವಹಿಸಿ, ಚಿತ್ರಕಲೆ ಬಿಡಿಸಿದರು. ಶಾಲಾ ಮಕ್ಕಳು ಚಿತ್ರ ಪ್ರದರ್ಶನವನ್ನು ವೀಕ್ಷಿಸಿದರು.
ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೊಲ್ಲಾಪುರ ಅತಿಥಿಯಾಗಿ ಉಪಸ್ಥಿತರಿದ್ದರು.
ಚಿತ್ರಕಲಾ ಶಿಕ್ಷಕರಾದ ಎ.ಆರ್. ಕುರಬರ, ಸುಭಾಷ ಕುರಣೆ, ಬಿ.ಎ. ಬಿರಾದಾರ, ರಾಜು ಬಡೇಸ್, ಎ.ಎಸ್. ಪಾಟೀಲ್, ಎಚ್.ಎಸ್. ಮದರ್ ಇದ್ದರು.
ಸತ್ಕಾರ: ಕಾರ್ಯಾಗಾರ ಯಶಸ್ಸಿಯಾಗಲು ಸಹಾಯ ಮಾಡಿದ್ದ ಮೇಘಾ ಸಂಸ್ಥೆ ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ಗುರು ಅಪ್‍ಸೆಟ್‍ನ ಈರಪ್ಪ ಕಾಳಪ್ಪಗೋಳ, ಶ್ರೇಯಾ ಆಯ್‍ಕೇರ್ ಸೆಂಟರ್, ಆಪ್ಟಿಕಲ್ಸ್‍ನ ಸುಧಾಕರ ಸಂಬರಗಿ ಅವರನ್ನು ಸನ್ಮಾನಿಸಿದರು.