ಮೂಡಲಗಿ: ಪಟ್ಟಣವು ಭಾವೈಕ್ಯತೆಯ ಸ್ಥಾನವಾಗಿದ್ದು, ಎಲ್ಲ ಹಬ್ಬ ಹರಿದಿನಗಳನ್ನು ಸಂಪ್ರದಾಯದಂತೆ ಆಚರಿಸಿ ಸಂಭ್ರಮಿಸಬೇಕು ಆಚರಣೆಯಲ್ಲಿ ಸೌಹಾರ್ದತೆಯನ್ನು ಬೆರೆಸಿದರೆ ಎಲ್ಲರಲ್ಲಿ ಅನ್ಯೋನ್ಯತೆ ಉಂಟಾಗಿ ಹಬ್ಬಕ್ಕೆ ಹೊಸ ಕಳೆ ಬರುತ್ತದೆ ಎಂದು ಪಿಎಸ್‍ಐ ಸೋಮೇಶ ಗೆಜ್ಜಿ ಹೇಳಿದರು.
ರವಿವಾರದಂದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜರುಗಿದ ಹೋಳಿ ಹಬ್ಬದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾರ್ಚ 7 ಮತ್ತು 8ರಂದು ಹೋಳಿ ಹಬ್ಬದ ಆಚರಣೆ ಇದ್ದು ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಾರ್ವಜನಿಕರು ಶಾಂತಿಯುತವಾಗಿ ಹೋಳಿ ಹಬ್ಬವನ್ನು ಆಚರಿಸಬೇಕು. ಪಟ್ಟಣದ ಹಾಗೂ ಹಳ್ಳಿಗಳಲ್ಲಿಯು ಇರುವಂತ ಊರಿನ ಗಣ್ಯರು ಮತ್ತು ಯುವಕರು ಅಹಿತಕರ ಘಟನೆಗೆ ಕಾರಣವಾಗದಂತೆ ಎಚ್ಚರಿಕೆಯನ್ನು ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಎ ಎಸ್‍ಐ ಎಸ್ ಬಿ ಮುರನಾಳ, ಪೊಲೀಸ್ ಸಿಬ್ಬಂಧಿಗಳಾದ ಎನ್ ಎಸ್ ಒಡೆಯರ್, ಈರಣ್ಣ ರಣದೇವ ಹಾಗೂ ಪಟ್ಟಣದ ಸಾರ್ವಜನಿಕರು ಉಪಸ್ಥಿತರಿದ್ದರು.