ಮೂಡಲಗಿ : ಅಪಾರ ಅಭಿಮಾನಿಗಳನ್ನು ಅಗಲಿರುವ ಕರ್ನಾಟಕ ರತ್ನ ಅಪ್ಪು ಅವರ ಜನ್ಮ ದಿನಾಚರಣೆ ಅಂಗವಾಗಿ ಶುಕ್ರವಾರದಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಬಳಿ ಪಾಳು ಬಿದ್ದ ಬಸ್ ತಂಗುದಾನವನ್ನು ಪರಸರ ಪ್ರೇಮಿ ಈರಪ್ಪ ಢವಳೇಶ್ವರ ಹಾಗೂ ಗೆಳಯರ ಬಳಗದವರು ಸೇರಿ ಪಾಳು ಬಿದ್ದ ಬಸ್ ತಂಗುದಾನವನ್ನು ನವೀಕರಿಸಿ, ಡಾ. ಪುನೀತ ರಾಜಕುಮಾರ ತಂಗುದಾನ ಎಂಬ ನಾಮಕರಣದ ನಾಮಘಲಕವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಇಂದು ಅಪ್ಪು ಅಭಿಮಾನಿಗಳಿಗೆ ಮಾತ್ರವಲ್ಲ, ಕನ್ನಡವನ್ನು ಪ್ರೀತಿ, ಉಳಿಸಿ ಬೆಳಸುವ ಪ್ರತಿಯೊಬ್ಬರಿಗೂ ಒಂದು ಶುಭ ದಿನ ಅಂದ್ರೆ ತಪ್ಪಾಗಲ್ಲ. ಕನ್ನಡದ ಕಂದ ರಾಜಣ್ಣನ ಮುದ್ದು ಮಗ ಅಪ್ಪು ನಮ್ಮನ್ನ ಅಗಲಿ ಇಂದಿಗೆ ಎರಡು ವರ್ಷಗಳು ಕಳಿದಿವೆ. ಆದ್ರೆ ನಮ್ಮ ಮಧ್ಯ ಅವರಿಲ್ಲ ಎನ್ನುವ ನೋವಿಗಿಂತ ಅವರು ಎಲ್ಲೂ ಹೋಗಿಲ್ಲ ಎನ್ನುವ ಬಲವಾದ ನಂಬಿಕೆ ಎಲ್ಲರಲ್ಲಿಯೂ ಇಂದಿಗೂ ಇದೆ. ಇಲ್ಲೋ ಎಲ್ಲೋ ಹೋಗಿದ್ದಾರೆ ಬರ್ತಾರೆ ಎನ್ನುವ ಭಾವನೆ ಸದಾ ಇರುತ್ತದೆ ಎಂದರು.
ಅಪ್ಪು ಅವರು ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಎಲ್ಲರ ಪ್ರೀತಿಯ ಡಾ. ಪುನೀತ ರಾಜಕುಮಾರ ಅವರು ಅತಿ ಚಿಕ್ಕ ವಯಸ್ಸಿನಲ್ಲಿ ಅವರು ಮಾಡಿದ ಸಾಧನೆಗಳು, ಸಿನಿಮಾರಂಗ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಪಡೆದುಕೊಂಡ ಜನಪ್ರಿಯತೆ, ಕೈಗೊಂಡ ಜನಸೇವೆಯನ್ನು ವರ್ಣಿಸಲು ಪದಗಳೇ ಸಾಲದು ಎಂದು ಹೇಳಿದರು.
ಯುವ ಕಲಾವಿದ ಓಂ ಸಂತಾ ಮಾತನಾಡಿ, ಕರ್ನಾಟಕ ರತ್ನ ಪುನೀತ ರಾಜಕುಮಾರ ಅವರು ಅಗಲಿ ಇಂದಿಗೆ ಎರಡು ವರ್ಷಗಳಾಗಿದೆ. ಅಪ್ಪು ಇದ್ದಿದ್ದರೇ ಇಂದು ಸಂಭ್ರಮದ ಕಳೆಯೇ ಬೆರೆಯಾಗಿರುತ್ತಿತ್ತು. ತಮ್ಮ ಅಭಿಮಾನಿಗಳಿಗೆ ಹೊಸ ಸಿನಿಮಾದ ಗಿಫ್ಟ್ ನೀಡುತ್ತಿದ್ದರು. ಆದ್ರೆ ವಿಧಿ ಆಟವೇ ಬೇರೆಯಾಗಿತ್ತು. ಇಂದು ನೋವಿನಲ್ಲಿಯೂ ಸಹ ಕನ್ನಡದ ಕಂದನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಅವರ ಅಭಿಮಾನಿಗಳಾದ ನಾವುಗಳು ಆಚರಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಪುಸರಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸಿ.ಬಿ.ಪಾಟೀಲ, ಗಾಯಕ ಮಂಜುನಾಥ ಹುಡೆದ, ಪುರಸಭೆ ಸದಸ್ಯರಾದ ಸಂತೋಷ ಸೋನವಾಲ್ಕರ, ಶಿವು ಚಂಡಕಿ, ಶಿವು ಸಣ್ಣಕ್ಕಿ, ಈರಣ್ಣ ಕೊಣ್ಣುರ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಅಪ್ಪು ಅಭಿಮಾನಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.