ಸಡಗರದಿಂದ ನಡೆದ ಬೆಟಗೇರಿ ಗ್ರಾಮದೇವತೆ ಜಾತ್ರಾಮಹೋತ್ಸವ
ಬೆಟಗೇರಿ:ಐದು ವರ್ಷಕ್ಕೂಮ್ಮೆ ಐದು ದಿನಗಳ ಕಾಲ ಜರುಗುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದೇವತೆ ಶ್ರೀದ್ಯಾಮವ್ವದೇವಿ 3ನೇ ಜಾತ್ರಾಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು 3ನೇ ದಿನವಾದ ಜು.26 ರಂದು ವಿಜೃಂಭನೆಯಿಂದ ನಡೆದವು.
ಮುಂಜಾನೆ 7 ಗಂಟೆಗೆ ಶ್ರೀದೇವಿಗೆ ಉಡಿ ತುಂಬುವ, ನೈವೇದ್ಯ ಸಮರ್ಪನೆ ನಡೆದು, ಮುಂಜಾನೆ 8 ಗಂಟೆಗೆ 5 ಕಿ.ಮೀ.ಓಟದ ಸ್ಪರ್ಧೆ, 10 ಗಂಟೆಗೆ ತೆರೆಬಂಡಿ ಶರ್ತು ಜರುಗಿತು. ಸಾಯಂಕಾಲ 5 ಗಂಟೆಗೆ ಶ್ರೀದೇವಿಯನ್ನು ಉದ್ದಮ್ಮನ ಗುಡಿಯಿಂದ ಪ್ರಮುಖ ಬೀದಿಗಳ ಮುಖಾಂತರ ಅಂಬೇಡ್ಕರ್ ಸರ್ಕಲ್‍ಗೆ ತಂದು ಕೂಡ್ರಿಸಲಾಯಿತು. ರಾತ್ರಿ 10ಗಂಟೆಗೆ ಶ್ರೀ ದ್ಯಾಮವ್ವದೇವಿ ನಾಟ್ಯ ಸಂಘದವರಿಂದ ಗೌಡನ ದೌರ್ಜನ್ಯಕ್ಕೆ ಸಿಂಹಗರ್ಜನೆ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು. ವಿವಿಧ ಶರ್ತುಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸ್ಥಳೀಯ ಶ್ರೀದೇವಿಯ ಭಕ್ತರು, ಗಣ್ಯರು, ಗ್ರಾಮದೇವತೆ ಜಾತ್ರಾಮಹೋತ್ಸವ ಆಚರಣಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮದೇವತೆ ದೇವಾಲಯ ಅರ್ಚಕರು, ಸ್ಥಳೀಯರು ಇದ್ದರು. ಮಕ್ಕಳು, ಯುವಕರು ಒಬ್ಬರಿಗೊಬ್ಬರು ಭಂಡಾರ ಎರಚಿ ಸಂಭ್ರಮಿಸಿದರು.
ಗುರುವಾರದ ಕಾರ್ಯಕ್ರಮ?: ಜು.27ರಂದು ಡಾ.ಅಂಬೇಡ್ಕರ ಸರ್ಕಲ್‍ನಲ್ಲಿ ಮುಂಜಾನೆ ಶ್ರೀದೇವಿಗೆ ನೈವೇದ್ಯ ಹಾಗೂ ಉಡಿ ತುಂಬುವ ಕಾರ್ಯಕ್ರಮದ ಬಳಿಕ ಅಂಬೇಡ್ಕರ್ ಸರ್ಕಲ್‍ದಿಂದ ಶ್ರೀದೇವಿಯನ್ನು ಪ್ರಮುಖ ಬೀದಿಗಳ ಮುಖಾಂತರ ತಂದು ಶ್ರೀ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಕುಡ್ರಿಸುವದು. ಮುಂಜಾನೆ 8 ಗಂಟೆಗೆ 45-55 ಎಚ್‍ಪಿ ಓಳಗಿನ ಟ್ಯಾಕ್ಟರ್-ಟ್ಯಾಕ್ಟರ್ ಜಗ್ಗುವ ಸ್ಪರ್ಧೆ ನಡೆಯಲಿದೆ. ಮದ್ಯಾಹ್ನ 12 ಗಂಟೆಗೆ ಓಪನ್ ಟಗರಿನ ಕಾಳಗ, 2ಗಂಟೆಗೆ ಹಾಲಲ್ಲಿನ ಟಗರಿನ ಕಾಳಗ ಸ್ಪರ್ಧೆ, ಸಂಜೆ 7 ಗಂಟೆಗೆ ಸ್ಥಳೀಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ, ಝೀ ವಾಹಿನಿ ಕಲಾವಿದೆ ಕು.ಪ್ರಗತಿ ಬಡಿಗೇರ ಅವರಿಂದ ಸಂಗೀತ ಕಾರ್ಯಕ್ರಮ, ಗೋಕಾಕ ರತಿಕಾ ನೃತ್ಯ ನಿಕೇತನ ಅವರಿಂದ ಭರತನಾಟ್ಯ, ನೃತ್ಯ, ರಾಜೇಂದ್ರ ಮತ್ತು ನರೇಂದ್ರ ಲಕಾಟಿ ಅವರಿಂದ ಯೋಗ ನೃತ್ಯ ನಡೆಯಲಿದೆ ಎಂದು ಇಲ್ಲಿಯ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾಮಹೋತ್ಸವ ಆಚರಣಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.