‘ಶಾಂತಿ, ನೆಮ್ಮದಿಗಾಗಿ ಮನಸ್ಸು ಶುದ್ಧವಾಗಿರಬೇಕು’
ಮೂಡಲಗಿ: ‘ದೇವರಲ್ಲಿ ಭಕ್ತಿ ಮತ್ತು ಸತ್ಪುರುಷರ ಮಾತುಗಳನ್ನು ಆಲಿಸುವ ಮೂಲಕ ಮನುಷ್ಯನಿಗೆ ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ’ ಎಂದು ಚಿಕ್ಕೋಡಿಯ ಸಂಪಾದನಾ ಚರಂತೇಶ್ವರ ಮಠದ ಸಂಪಾದನಾ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ವಡೇರಹಟ್ಟಿಯ ಅಂಬಾಭವಾನಿ ದೇವಿ ನೂತನ ದೇವಸ್ಥಾನದ ಉದ್ಘಾಟನೆ ಹಾಗೂ ದೇವಿಯ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಮನುಷ್ಯನಿಗೆ ಉತ್ತಮ ಆರೋಗ್ಯ ಮತ್ತು ನೆಮ್ಮದಿಯು ಬಹುದೊಡ್ಡ ಭಾಗ್ಯವಾಗಿದ್ದು ಅದಕ್ಕಾಗಿ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಬೇಕು ಎಂದರು.
ಬೆಲ್ಲದ ಬಾಗೇವಾಡಿಯ ಮಹಾಂತೇಶ್ವರ ವೀರಕ್ತಮಠದ ಶಿವಾನಂದ ಸ್ವಾಮೀಜಿ ಮಾತನಾಡಿ ಮನುಷ್ಯ ಪ್ರಾಪಂಚಿಕ ಒತ್ತಡದಲ್ಲಿ ತನ್ನ ಶಾಂತಿ, ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದೇವೆ. ದೇವರಲ್ಲಿಯ ಶ್ರದ್ಧಾ ಭಕ್ತಿಯ ಮೂಲಕ ಬದುಕಿನಲ್ಲಿ ಆನಂದವನ್ನು ಪಡೆದುಕೊಳ್ಳಬೇಕು ಎಂದರು.
ಅಂಬಾ ಪೀಠದ ಪೀಠಾಧ್ಯಕ್ಷ ನರಾಯಣ ಶರಣರು ಪ್ರಾಸ್ತಾವಿಕ ಮಾತನಾಡಿ ಅಂಬಾಭವಾನಿ ನೂತನ ದೇವಸ್ಥಾನ ನಿರ್ಮಾಣದಲ್ಲಿ ಭಕ್ತರ ಸಹಕಾರವು ಅನನ್ಯವಾಗಿದೆ ಎಂದರು.
ಕಟಕೋಳ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಭಾಗೋಜಿಕೊಪ್ಪದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಕಬ್ಬೂರದ ರೇವಣಸಿದ್ದೇಶ್ವರ ಸ್ವಾಮೀಜಿ, ಹುಣಸ್ಯಾಳ ಪಿಜಿಯ ನಿಜಗುಣ ದೇವರು, ಸುಣಧೋಳಿಯ ಶಿವಾನಂದ ಸ್ವಾಮೀಜಿ, ಚಿಮ್ಮಡದ ಪ್ರಭುದೇವ ಸ್ವಾಮೀಜಿ, ಗೋಕಾಕದ ಸುವರ್ಣಾತಾಯಿ ಹೊಸಮಠ, ಕಲ್ಲೋಳಿಯ ಅಕ್ಕಮಹಾದೇವಿ, ಕೊಟಬಾಗಿಯ ಪ್ರಭುದೇವ ಸ್ವಾಮೀಜಿ, ಡೋಣವಾಡದ ಶಿವಾನಂದ ಸ್ವಾಮೀಜಿ, ಹಂಚಿನಾಳದ ಶಾಂತಾನಂದ ಸ್ವಾಮೀಜಿ ಭಾಗವಹಿಸಿದ್ದರು.
ಗೋಕಾಕದ ಲಕ್ಷ್ಮೀ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸವೋತ್ತಮ ಜಾರಕಿಹೊಳಿ ಅತಿಥಿಯಾಗಿ ಭಾಗವಹಿಸಿದ್ದರು.
ಬೆಳಿಗ್ಗೆ ವಿವಿಧ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ದೇವಸ್ಥಾನದ ಉದ್ಘಾಟನೆ ಮತ್ತು ದೇವಿ ಮೂರ್ತಿ ಪ್ರತಿಷ್ಠಾಪನೆ ಜರುಗಿತು. ಹಾಲಸಿದ್ದೇಶ್ವರ ಮತ್ತು ಮರಡಿಸಿದ್ದೇಶ್ವರರ ಪಲ್ಲಕ್ಕಿಗಳನ್ನು ಬರಮಾಡಿಕೊಂಡರು.
ವಿವಿಧ ಜಾನಪದ ಕಲಾ ಪ್ರದರ್ಶನ ಜರುಗಿತು.
ವಿವೇಕಾನಂದ ಯಮಕನಮರಡಿ ಕಾರ್ಯಕ್ರಮವನ್ನು ನಿರೂಪಿಸಿದರು.