ಮೂಡಲಗಿ: ಸದೃಢ ರಾಷ್ಟ್ರ ನಿರ್ಮಾಣ ಆಗಬೇಕಾದರೆ ಪ್ರಸ್ತುತ ದಿನಮಾನದಲ್ಲಿ ಯುವ ಜನತೆಯ ನಿಸ್ವಾರ್ಥ ಸೇವೆ ಅತಿ ಅವಶ್ಯಕವಾಗಿದೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಹೇಳಿದರು. ಅವರು ಮೂಡಲಗಿ ಪಟ್ಟಣದ ಕರುನಾಡ ಸೈನಿಕ ತರಬೇತಿ ಕೇಂದ್ರದಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ ಬೆಳಗಾವಿ ಹಾಗೂ ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಮಾಜ ಸೇವಾ ಸಂಘ ಕಲ್ಲೋಳಿ ಇವುಗಳ ಆಶ್ರಯದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಯ ಜನ್ಮದಿನವನ್ನು ಸಸಿಗೆ ನೀರು ಉನಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ಹೊಸ ಹೊಸ ಸಂಘಗಳನ್ನು ಹುಟ್ಟು ಹಾಕಿ ಅವುಗಳ ಮುಖಾಂತರ ಜನ ಜಾಗೃತಿ ಕಾರ್ಯಕ್ರಮಗಳನ್ನು ಯುವಕರು ಮಾಡಬೇಕು ಎಂದರು. ಅರಭಾವಿ ಮಂಡಲದ ಅಧ್ಯಕ್ಷ ಮಹಾದೇವ ಶೆಕ್ಕಿ ಪಂಡಿತ್ ದೀನದಯಾಳ ಉಪಾಧ್ಯಯವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಜನ ಸಂಘದ ಮೂಲಕ ಸಂಘಟನೆ ಮಾಡಿ ದೇಶದಲ್ಲಿ ಇವತ್ತು ಸುಭದ್ರ ಸರ್ಕಾರ ನಡೆಸಲು ಪಂಡಿತ್ ದೀನದಯಾಳ್ ಉಪಾಧ್ಯಯರ ತ್ಯಾಗ ಬಲಿದಾನ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಶ್ರೀ ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಮೋದ ನುಗ್ಗಾನಟ್ಟಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ನಮ್ಮ ಯುವ ಸಂಘಟಕ ಸಿದ್ದಣ್ಣ ದುರದುಂಡಿ ಅವರು ನಿರಂತರ ನಿಸ್ವಾರ್ಥ ಸೇವೆ ಮತ್ತು ಸಂಘಟನೆ ಮಾಡುತ್ತಿದ್ದು ನಾವು ಎಲ್ಲರು ಒಟ್ಟಾಗಿ ಸೇರಿ ಸಂಘಟನೆ ಮಾಡುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಕರುನಾಡ ಸೈನಿಕ ತರಬೇತಿ ಕೇಂದ್ರದ ಅಧ್ಯಕ್ಷರಾದ ಸವಿತಾ ತುಕ್ಕಣ್ಣವರ, ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾ ಮತ್ತು ಸಮಾಜ ಸೇವಾ ಸಂಘದ ಅಧ್ಯಕ್ಷ ಯಲ್ಲಾಲಿಂಗ ವಾಳದ, ಶಂಕರ ದೊಡಮನಿ, ಪಾಂಡು ಮಹೇಂದ್ರಕರ, ಶ್ರೀಧರ್ ಸಲಬನ್ನವರ, ಶಿವು ದೊಡಗೋಣಿ ಹಾಗೂ ಸಂಘಟಕರು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.