ಮೂಡಲಗಿ: ಮಡಿವಾಳ ಸಮಾಜದ ಎಸ್ಸಿ ಮೀಸಲಾತಿಗಾಗಿ ಸಾಕಷ್ಟು ಜನರು ರಾಜ್ಯ ಸರ್ಕಾರದ ಬಾಗಿಲು ತಟ್ಟುವಂತ ಕಾರ್ಯವನ್ನು ಮಾಡಿದ್ದಾರೆ ವಿನಃ ಸಮಾಜದ ಗುರುಗಳಾದ ಬಸವಾಚಿದೇವ ಸ್ವಾಮೀಜಿಯವರಿಂದ ಮಾತ್ರ ಸಮಾಜದ ಏಳಿಗೆಗಾಗಿ ಯಾವುದೇ ಕೊಡುಗೆ ಇಲ್ಲ ಎಂದು ಮಡಿವಾಳ ಸಮಾಜದ ಹಿರಿಯ ಮುಖಂಡ ಹಣಮಂತ ಮಡಿವಾಳರ(ತಲ್ಲೂರ) ಬೇಸರ ವಕ್ತಪಡಿಸಿದರು.
ರವಿವಾರದಂದು ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಸುಮಾರು 18 ಲಕ್ಷ ಮಡಿವಾಳ ಸಮಾಜದ ಜನರು ಇರುವುದರಿಂದ ಮಡಿವಾಳ ಸಮಾಜವು ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದ ಸಮಾಜವಾಗಿದೆ. ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ತಮ್ಮ ಸಮಾಜಕ್ಕಾಗಿ ಸಾಕಷ್ಟು ಪ್ರತಿಭಟನೆ, ಪಾದಯಾತ್ರೆ ಮಾಡುವ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ನಮ್ಮ ಸಮಾಜದ ಶ್ರೀಗಳು ಮಾತ್ರ ಸಮಾಜದ ಯಾವುದೇ ಅಭಿವೃದ್ಧಿಗಾಗಿ ಕಾರ್ಯಗಳನ್ನು ಮಾಡುತ್ತಿಲ್ಲ ಇದರಿಂದ ಸಮಾಜದ ಜನರು ಕೂಡಾ ಶ್ರೀಗಳ ಮೇಲೆ ಅಸಮಾದಾನಗೊಂಡಿದ್ದಾರೆ. ಈ ಸಮಾಜವನ್ನು ಎಸ್ಸಿ ಮೀಸಲಾತಿ ಸೇರಿಸಬೇಕೆನ್ನುವದು ನಮ್ಮ ಕೂಗಾಗಿದೆ ಎಂದರು.
ಸಮಾಜದ ಮುಖಂಡರಾದ ಶಿವಾನಂದ ಮಡಿವಾಳರ, ಮಹದಾಯಿ ಹೋರಾಟಗಾರ ಹಣಮಪ್ಪ ಮಡಿವಾಳರ, ರಬಕವಿ-ಬನಹಟ್ಟಿ ತಾಲೂಕಾಧ್ಯಕ್ಷ ಸಂಗಮೇಶ ಮಡಿವಾಳರ ಮಾತನಾಡಿ, ಸಿದ್ದರಾಮಯ್ಯ ಅವರು ಕಳೆದ ಅವಧಿಯಲ್ಲಿ ಸಿಎಂ ಆಗಿರುವ ಅವಧಿಯಲ್ಲಿ ನಮ್ಮ ಸಮಾಜಕ್ಕೆ ಎಸ್ಸಿ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರು, ಈವಾಗ ಅವರೇ ಸರ್ಕಾರ ಅವರೇ ಸಿಎಂ ಇರುವುದರಿಂದ ನಮ್ಮ ಸಮಾಜದ ಅಭಿವೃದ್ಧಿಗಾಗಿ ಮೀಸಲಾತಿಯನ್ನು ನೀಡಿದರೇ ನಮ್ಮ ಸಮಾಜವು ರಾಜೀಕಿಯವಾಗಿ ಮತ್ತು ಆರ್ಥಿಕವಾಗಿ ಬಲಿಷ್ಠರಾಗಲು ಸಾಧ್ಯ ಎಂದರು.
ನಮ್ಮ ಸಮಾಜದ ಕೆಲವು ಮುಖಂಡರು ತಮ್ಮ ಲಾಭಕ್ಕಾಗಿ ಸಮಾಜದ ಹೆಸರಿನಲ್ಲಿ ಸಂಘಟನೆಗಳನ್ನು ತೆರೆದು ಸಮಾಜದ ಜನರ ದಾರಿ ತಪ್ಪಿಸುವಂತ ಕಾರ್ಯ ಮಾಡಿತ್ತಿದ್ದಾರೆ. ಅಂತಹ ವ್ಯಕ್ತಿಗಳು ಸಮಾಜದ ಏಳಿಗೆಗಾಗಿ ಕಾರ್ಯ ಮಾಡುವಂತಾಗಬೇಕೆಂದು ಮತ್ತು ನಮ್ಮ ಜೊತೆಗೆ ಅವರು ಕೂಡಾ ಮೀಸಲಾತಿಗಾಗಿ ಕೈಜೋಡಿಸಬೇಕೆಂದರು.
ಈ ಸಂದರ್ಭದಲ್ಲಿ ಸಮಾಜ ಸಂಘಟನೆಯ ಶ್ರೀಕಾಂತ ಮಡಿವಾಳರ, ಜಗದೀಶ ಮಡಿವಾಳರ, ಶಿವಲಿಂಗ ಮಡಿವಾಳರ, ಹಾಲಪ್ಪ ಪರಿಟ್, ಸಾಗರ ಮಡಿವಾಳರ, ಗೀರಿಶ ಮಡಿವಾಳರ ಉಪಸ್ಥಿತಿರಿದ್ದರು.
