ಮೂಡಲಗಿ: ಕಳೆದ 40 ವರ್ಷಗಳಿಂದ ಸಹಕಾರ. ಸಾಮಾಜಿಕ, ರಾಜಕೀಯ ಚಟುವಟಿಕೆಗಳ ಮೂಲಕ ಈ ಭಾಗದ ಜನರ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ಅದರ ಮುಂದುವರೆದ ಭಾಗವಾಗಿ ನನ್ನ ಸೇವೆಯನ್ನು ಇನ್ನಷ್ಟು ನಿಕಟಗೊಳಿಸಬೇಕೆಂಬ ಹಂಬಲದೊಂದಿಗೆ ಸಮೀಪದ ಯಾದವಾಡ ಪಟ್ಟಣದಲ್ಲಿ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿ ಕಲ್ಲೋಳಿ ಇದರ ನೂತನ 3ನೇ ಶಾಖೆಯನ್ನು ಪ್ರಾರಂಭಿಸುತ್ತಿದ್ದೆವೆಂದು ರಾಜ್ಯಸಭಾ ಸಂಸದ ಹಾಗೂ ಸಂಸ್ಥಾಪಕ ಅಧ್ಯಕ್ಷ ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದರು.
ಶುಕ್ರವಾರ ತಾಲೂಕಿನ ಯಾದವಾಡ ಪಟ್ಟಣದ ಬಸವೇಶ್ವರ ಸರ್ಕಲ್ ಹತ್ತಿರ ನೂತನ ಶಾಖೆಯ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ದುಡಿಯುವ ಕೈಗಳಿಗೆ ಉದ್ಯೋಗ ನೀಡುವುದು ಹಾಗೂ ಸಣ್ಣ ವ್ಯಾಪಾರಸ್ಥರಿಗೆ ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯ, ಮಹಿಳೆಯರಿಗೆ ಸ್ವ ಸಹಾಯ ಗುಂಪುಗಳ ಮೂಲಕ ಸಾಲ ನೀಡುವುದು, ಆರ್ಥಿಕವಾಗಿ ಸಂಪನ್ನರಾಗಿರುವ ಜನರಿಗೆ ಠೇವಣಿಯ ಸೌಲಭ್ಯ ಇರುತ್ತದೆ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಚಿಕ್ಕ ಉಳಿತಾಯ ಮಾಡುವ ಮಧ್ಯಮ ವರ್ಗದ ಬಂಧುಗಳಿಗೆ ಆರ್ ಡಿ ಸೌಲಭ್ಯ ನಿಮ್ಮ ಮನೆ ಬಾಗಿಲಿಗೆ ಆರ್ಥಿಕ ಸೇವೆ ತಲುಪಿಸಿ ಈ ಭಾಗದ ಜನರ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಿ ನಿಮ್ಮ ಅಭಿವೃದ್ದಿಗೆ ಅಳಿಲು ಸೇವೆ ಸಲ್ಲಿಸುವ ಸಂಕಲ್ಪದೊಂದಿಗೆ ಸಹಕಾರಿ ಸಂಸ್ಥೆಯನ್ನು ಪ್ರಾರಂಭಿಸಿದ್ದೇವೆ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಭಾಗೋಜಿ ಕೊಪ್ಪ ಡಾ,ಶಿವಲಿಂಗ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ ಪ್ರತಿಯೊಂದು ಗ್ರಾಮಗಳಲ್ಲಿ ಸದೃಡ ಸೌಹಾರ್ದ ಸಹಕಾರಿ ಸಂಘಗಳು ಇದ್ದರೆ ಗ್ರಾಹಕರಿಗೆ, ರೈತರಿಗೆ, ಸಣ್ಣ ವ್ಯಾಪಾರಸ್ಥರಿಗೆ ಅನೂಕೂಲವಾಗಲಿದೆಂದರು.
ಇದೇ ಸಂದರ್ಭದಲ್ಲಿ ಹಲವು ಪೂಜ್ಯರನ್ನು ಸಂಸದ ಈರಣ್ಣ ಕಡಾಡಿ ಅವರು ಸನ್ಮಾನಿಸಿದರು.
ಸಹಕಾರಿ ಉಪಾಧ್ಯಕ್ಷ ಶ್ರೀಶೈಲ ತುಪ್ಪದ, ಶ್ರೀಶೈಲ ಢವಳೇಶ್ವರ, ರಾಜಶೇಖರ ಕಲ್ಯಾಣಿ, ಆನಂದ ರೂಗಿ, ಬಸವರಾಜ ಹಿಡಕಲ್, ಸುರೇಶ ಒಣಕಿ, ಪ್ರಭು ಹಿರೇಮಠ, ಶ್ರೀಶೈಲ ಪೂಜೇರಿ, ತಮ್ಮಣ್ಣ ದೇವರ, ಸುಭಾಸ ಒಂಟಗೂಡಿ, ಈರಪ್ಪ ದೇಯನ್ನವರ, ಬಸವರಾಜ ಕತ್ತಿ, ಹನಮಂತ ಕಲಕುಟ್ರಿ, ಪರಪ್ಪ ಗಿರೆಣ್ಣವರ ಸೇರಿದಂತೆ ಸಹಕಾರಿ ಆಡಳಿತ ಮಂಡಳಿ ಸದಸ್ಯರು, ಸಲಹಾ ಸಮಿತಿ ಸದಸ್ಯರು ಹಾಗೂ ಸಹಕಾರಿಗಳು ಉಪಸ್ಥಿತರಿದ್ದರು.