ಮೂಡಲಗಿ: ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಶಿಸ್ತನ್ನು ಕಲಿಸಬೇಕೆಂದು ಬೆಳಗಾವಿಯ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಗಜಾನನ ಮನ್ನಿಕೇರಿ ಹೇಳಿದರು.
ಅವರು ತಾಲೂಕಿನ ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಶ್ರೀ ನಿಜಗುಣದೇವರ ವಿದ್ಯಾಸಂಸ್ಥೆ ವತಿಯಿಂದ ಜರುಗಿದ ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ಕಬ್ ಬುಲ್‌ಬುಲ್ ದಳಗಳನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪೂಜ್ಯ ಶ್ರೀ ನಿಜಗುಣದೇವ ಮಹಾಸ್ವಾಮಿಗಳು ತಮ್ಮ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಶಿಸ್ತು, ಸಂಸ್ಕಾರ,ಸoಗೀತ ಕಲಿಸುವುದರ ಮೂಲಕ ಉತ್ತಮ ಪ್ರಜೆಗಳನ್ನಾಗಿ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದದ್ದು. ಪಾಲಕರಲ್ಲಿ ಮತ್ತು ಶಿಕ್ಷಕರಲ್ಲಿಯೂ ಕೂಡಾ ಒಳ್ಳೇಯ ಮನೋಭಾವನೆಯನ್ನು ಮೂಡಿಸುವಂತಹ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಉತ್ತಮ ಸಂದೇಶವನ್ನು ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ದೈಹಿಕವಾಗಿ ಮಾನಸಿಕವಾಗಿ ಸದೃಢರಾಗಿ ಬೆಳೆಯಲು ಮತ್ತು ದೇಶಾಭಿಮಾನ ಕಲಿಸಲು ಸ್ಕೌಟ್ಸ್ ಮತ್ತು ಗೈಡ್ಸ್ ಒಳ್ಳೇಯ ಪ್ರೇರಣಾ ಶಕ್ತಿಯಾಗಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ನಿಜಗುಣದೇವ ಮಹಾಸ್ವಾಮಿಗಳು ಆಶೀರ್ವಚನ ನೀಡಿ ನಮ್ಮ ವಿದ್ಯಾಸಂಸ್ಥೆಯಲ್ಲಿ ನುರಿತ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಅಲ್ಲದೇ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ಸಾಹ ಬರುತ್ತದೆ. ನಮ್ಮ ಸಂಸ್ಥೆಗೆ ಹಿರಿಯ ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂಸ್ಥೆಯ ಹೆಮ್ಮೆಯ ವಿಷಯವಾಗಿದೆ ಎಂದರು.
ಮೂಡಲಗಿ ಕ್ಷೇತ್ರಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಸ್ಕೌಟ್ಸ್ ಮತ್ತು ಗೈಡ್ಸ್ ಮೂಡಲಗಿಯ ಕಾರ್ಯದರ್ಶಿ ಬಸವರಾಜ ನಿಡೋಣಿ, ಸಹಕಾರ್ಯದರ್ಶಿ ಸುಚೇತಾ ಪೂಜೇರಿ, ಸಿಆರ್‌ಪಿ ಆನಂದ ಹುಮ್ಮನವರ, ಯುವ ಮುಖಂಡ ರಾಮನಾಯ್ಕ ನಾಯ್ಕ ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮವನ್ನು ಶಾಲೆಯ ಪ್ರೀನ್ಸಿಪಾಲರಾದ ಕುಮಾರಿ ಜಿ.ಟಿ. ಮಾಧವಿ ನಿರೂಪಿಸಿ, ವಂದಿಸಿದರು.