ಗೋಕಾಕ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2ನೇ ಅವಧಿಯ ಒಂದು ವರ್ಷ ಪೂರ್ಣಗೊಂಡಿದ್ದು, ವಿಶ್ವದಲ್ಲಿಯೇ ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಇದಕ್ಕೆ ಪ್ರಧಾನಿ ಮೋದಿ ಅವರ ದೂರದೃಷ್ಠಿ ನಾಯಕತ್ವವೇ ಕಾರಣವೆಂದು ಅರಭಾಂವಿ ಶಾಸಕ ಮತ್ತು ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸೋಮವಾರ ಸಂಜೆ ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಬಿಜೆಪಿ ಅರಭಾಂವಿ ಮಂಡಲ ಹಮ್ಮಿಕೊಂಡಿದ್ದ ಕರ್ನಾಟಕ ಜನಸಂವಾದ ಸಮಾರೋಪ ಸಮಾರಂಭದ ನಿಮಿತ್ಯ ಕಾರ್ಯಕರ್ತರೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದ ಅವರು, ಮಹಾಮಾರಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ನಾಗರೀಕರ ಸುರಕ್ಷತೆಗಾಗಿ ತೆಗೆದುಕೊಂಡ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕ್ರಮಗಳನ್ನು ಶ್ಲಾಘಿಸಿ ಅಭಿನಂದಿಸಿದರು.
ವಿಶ್ವವ್ಯಾಪಿಯಾಗಿ ಹರಡುತ್ತಿರುವ ಕೋರೋನಾ ಸೊಂಕು ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ. ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಳೆದ ಮಾರ್ಚ್ ತಿಂಗಳಿನಿಂದ ಮಹಾಮಾರಿ ಕಾಡುತ್ತಿದೆ. ಈ ಸಂದರ್ಭದಲ್ಲಿ ಜನತೆ ಲಾಕ್‍ಡೌನ್ ಒಳಗಾದಾಗ ಸಾಕಷ್ಟು ತೊಂದರೆಯಾಗಿದೆ. ಇದರ ಮಧ್ಯದಲ್ಲಿ ಜನರ ಸಂಕಷ್ಟವನ್ನು ಅರಿತು ನಮ್ಮ ಕಾರ್ಯಕರ್ತರು ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್, ಬಟ್ಟೆ, ಹೊದಿಕೆ, ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ದಿನಬಳಕೆ ವಸ್ತುಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರು ಸಮರ್ಥವಾಗಿ ಕಾರ್ಯ ನಿಭಾಯಿಸುವ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು.
ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮಾತನಾಡಿ, ಆತ್ಮನಿರ್ಭರ ರಾಷ್ಟ್ರವಾಗಲು ಪ್ರಧಾನಿ ಮೋದಿ ಅವರ ಪರಿಕಲ್ಪನೆಯು ದೇಶದ ನಾಗರೀಕರು ಸ್ವಾವಲಂಬಿ ಬದುಕಿಗೆ ಬುನಾಧಿಯಾಗಿದೆ. ಕೋರೋನಾ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಪಾಡುವ ದೃಷ್ಠಿಯಿಂದ ಕಾರ್ಯಕರ್ತರೊಂದಿಗೆ ವಿಡಿಯೋ ಸಂವಾದ ನಡೆಸಲಾಗುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಕಾಶ್ಮೀರ 370ನೇ ವಿಧೇಯಕ ರದ್ದು, ಮುಸ್ಲಿಂ ಮಹಿಳೆಯರಿಗೆ ಮರಣ ಶಾಸನವಾಗಿದ್ದ ತ್ರಿವಳಿ ತಲಾಖ, ಪೌರತ್ವ ತಿದ್ದುಪಡಿ ಕಾಯ್ದೆ ಸೇರಿದಂತೆ ಹಲವಾರು ಅಭೂತಪೂರ್ವ ಸಾಧನೆಯನ್ನು ಮೋದಿ ಅವರ ಸರ್ಕಾರ ಮಾಡಿದೆ. ರೈತರಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಬಿಜೆಪಿ ಮುಸ್ಲಿಮರ ವಿರೋಧಿಯಲ್ಲ. ದೇಶ ವಿರೋಧಿ ಚಟುವಟಿಕೆಯನ್ನು ನಡೆಸುವವರನ್ನು ಬಿಜೆಪಿ ಸಹಿಸುವದಿಲ್ಲ ಎಂದು ಹೇಳಿದರು.
ಶಾಸಕರ ಆಪ್ತ ಕಾರ್ಯದರ್ಶಿ ನಾಗಪ್ಪ ಶೇಖರಗೋಳ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಶ ಪಾಟೀಲ, ಮುಖಂಡರಾದ ಬಸವಂತ ಕಮತಿ, ಎಮ್.ಕೆ.ಕುಳ್ಳೂರ, ಜಯಾನಂದ ಪಾಟೀಲ, ಈರಣ್ಣ ಅಂಗಡಿ, ಅಬ್ದುಲ ಡಾಂಗೆ, ಚುನಾಯಿತ ಪ್ರತಿನಿಧಿಗಳು, ಸಹಕಾರಿಗಳು, ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.