ಅರಳಿಮಟ್ಟಿ ಸರಕಾರಿ ಪ್ರಾಥಮಿಕ ಶಾಲೆ ಈಗ ಪಿಎಂ ಶ್ರೀ ಯೋಜನೆಗೆ- ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ- ಮೂಡಲಗಿ ಶೈಕ್ಷಣಿಕ ವಲಯಕ್ಕೆ ಮತ್ತೊಂದು ಪಿಎಂಶ್ರೀ ಸರ್ಕಾರಿ ಪ್ರಾಥಮಿಕ ಶಾಲೆಯು ಆಯ್ಕೆಯಾಗಿದ್ದು, ತಾಲ್ಲೂಕಿನ ಅರಳಿಮಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕೇಂದ್ರ ಪುರಸ್ಕೃತ ಪಿಎಂಶ್ರೀ ಶಾಲೆಯನ್ನಾಗಿ ಪರಿವರ್ತನೆಗೊಳ್ಳಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.
ದೇಶದಲ್ಲಿನ ಗ್ರಾಮೀಣ ಪ್ರದೇಶದ ಶಾಲೆಗಳನ್ನು ಕೇಂದ್ರೀಯ ಶಾಲೆಗಳ ರೀತಿಯಲ್ಲಿ ಸ್ಥಾಪಿಸಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ ಗ್ರಾಮೀಣ ಪ್ರದೇಶಗಳಲ್ಲಿ ಪಿಎಂಶ್ರೀ ಹೆಸರಿನ ಶಾಲೆಗಳನ್ನು ಸ್ಥಾಪಿಸಲಾಗುತ್ತಿದ್ದು, ಮೂಡಲಗಿ ವಲಯದಲ್ಲಿ ಒಟ್ಟು ೮ ಶಾಲೆಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ದೇಶದ ವಿವಿಧ ರಾಜ್ಯಗಳಲ್ಲಿ ೧೪೫೦೦ ಪಿಎಂಶ್ರೀ ಶಾಲೆಗಳು ಆರಂಭಗೊಂಡಿದ್ದು, ನಮ್ಮ ರಾಜ್ಯದಲ್ಲಿ ಸುಮಾರು ೪೭೮ ಶಾಲೆಗಳು ಈಗಾಗಲೇ ಪ್ರಾರಂಭಗೊಂಡಿವೆ. ಈಗಾಗಲೇ ನಮ್ಮ ವಲಯದಲ್ಲಿ ಶಾಸಕರ ಮಾದರಿ ಶಾಲೆ ಗುರ್ಲಾಪೂರ, ಹುಣಶ್ಯಾಳ ಪಿಜಿ, ನಾಗನೂರ, ಕಲ್ಲೋಳ್ಳಿ, ಅರಭಾವಿ, ಮಲ್ಲಾಪೂರ ಪಿಜಿ ಮತ್ತು ಮೆಳವಂಕಿ ಗ್ರಾಮಗಳಲ್ಲಿ ಶಾಲೆಗಳು ಆರಂಭವಾಗಿವೆ. ಪ್ರಸ್ತುತ ೬ ನೇ ಹಂತದಲ್ಲಿ ಅರಳಿಮಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯು ಆಯ್ಕೆಯಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಅಭಿನಂದಿಸುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಈ ಪಿಎಂಶ್ರೀ ಯೋಜನೆಯಡಿಯ ಶಾಲೆಗಳಲ್ಲಿ ಕ್ರೀಡೆ, ಪರಿಸರ, ಸಂಸ್ಕೃತಿ, ಕಲಿಕಾ ಸಂಬಂಧಿತ ಚಟುವಟಿಕೆಗಳನ್ನು ಆಯೋಜಿಸಲು ಪ್ರತ್ಯೆಕ ಅನುದಾನವು ಲಭ್ಯವಿರುತ್ತದೆ. ಈ ಶಾಲೆಗಳ ಕಲಿಕೆ ಮತ್ತು ಮೂಲಭೂತ ಸೌಕರ್ಯಗಳಿಂದ ಶ್ರೀಮಂತಗೊಂಡು ಮಾದರಿ ಶಾಲೆಗಳಾಗಿ ರೂಪುಗೊಂಡು, ಶೈಕ್ಷಣಿಕ ನಾಯಕತ್ವವನ್ನು ಇವುಗಳು ವಹಿಸಿಕೊಳ್ಳುತ್ತಿವೆ. ಈ ಶಾಲೆಗಳ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕೇಂದ್ರೀಯ ಮಾದರಿಯ ಶಿಕ್ಷಣವನ್ನು ಒದಗಿಸುವ ಕನಸನ್ನು ಇಟ್ಟುಕೊಂಡಿರುವುದಾಗಿ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.