ಮೂಡಲಗಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಜರುಗಿದ ಶಾಂತಿ ಸಭೆಯಲ್ಲಿ ಸಿಪಿಐ ಶ್ರೀಶೈಲ ಬ್ಯಾಕೂಡ ಮಾತನಾಡಿದರು.
ಮೂಡಲಗಿ: ಗಣೇಶೋತ್ಸವ ಮತ್ತು ಈದ್ ಮಿಲಾದ್ ವೇಳೆ ನಿಯಮ ಮೀರಿ ಯಾರೇ ನಡೆದುಕೊಂಡರೆ ನಿರ್ಧಾಕ್ಷಿನಿವಾಗಿ ಕಾನೂನು ಕ್ರಮ ಜರುಗಿಸಲಾಗುವುದು. ಹಬ್ಬಗಳನ್ನು ಸಂಪ್ರದಾಯದಂತೆ ಆಚರಿಸಬೇಕು. ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಹಿಂದೂ-ಮುಸ್ಲಿಂ ಭಾಂದವರು ಶಾಂತಿ ಸೌರ್ಹಾದದಿಂದ ಆಚರಿಸಬೇಕು ಎಂದು ಸಿಪಿಐ ಶ್ರೀಶೈಲ ಬ್ಯಾಕೂಡ ಹೇಳಿದರು.
ಅವರು ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ನಿಮಿತ್ಯ ಜರುಗಿದ ಶಾಂತಿ ಸಭೆಯಲ್ಲಿ ಮಾತನಾಡಿ, ಎಲ್ಲ ಗಣೇಶ ಮಂಡಳಿಯವರು ಸಾರ್ವಜನಿಕರಿಗೆ ತೊಂದರೆಯಾಗದಂತೆ ರಸ್ತೆ ಮೇಲೆ ಮಂಟಪವನ್ನು ನಿರ್ಮಿಸಬಾರದು, ಗಣೇಶ ಮಂಡಳಿಯವರು ಕಡ್ಡಾಯವಾಗಿ ಅಗತ್ಯ ಪರವಾನಿಗೆ ಪಡೆದುಕೊಂಡು ಮಂಟಪವನ್ನು ನಿರ್ಮಿಸಬೇಕು, ಮಂಟಪದಲ್ಲಿ ಮುಂಜಾಗೃತ ಕ್ರಮವಾಗಿ ನಿಯಮಗಳನ್ನು ಪಾಲಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸಬೇಕು, ಹಬ್ಬ ಹರಿದಿನಗಳಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ. ಆಯಾ ಪ್ರದೇಶದ ಜನಪ್ರತಿನಿಧಿಗಳು, ಹಿರಿಯರೂ ಜವಾಬ್ದಾರಿ ವಹಿಸಿಕೊಳ್ಳಬೇಕೆಂದರು.
ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಹೆಸ್ಕಾಂ ಅಧಿಕಾರಿ ಎಂ.ಎಸ್.ನಾಗನವರ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಗಣೇಶ ಮಂಡಳಿಯವರು ತಮ್ಮ ದಾಖಲಾತಿಗಳೊಂದಿಗೆ ಪರವಾಣಿಗೆ ಪತ್ರವನ್ನು ಪಡೆದುಕೊಳ್ಳಬೇಕು ಎಂದರು.
ಪಿಎಸ್‍ಐ ರಾಜು ಪೂಜೇರಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯ ವೇದಿಕೆಯಲ್ಲಿ ಪುರಸಭೆ ಸದಸ್ಯರಾದ ಹನಮಂತ ಗುಡ್ಲಮನಿ, ಅಬ್ದುಲಗಫಾರ ಡಾಂಗೆ, ಆದಮ ತಾಂಬೋಳಿ ಹಾಗೂ ಅನ್ವರ ನದಾಫ್ ಉಪಸ್ಥಿತರಿದರು, ಸಭೆಯಲ್ಲಿ ಪೊಲೀಸ್ ಸಿಬ್ಬಂದಿ ಲಕ್ಷ್ಮಣ ಗೋಡೆಯರ, ಸಾಗರ ಚೌಗಲಾ ಹಾಗೂ ವಿವಿಧ ಗಣೇಶ ಮಂಡಳಿ ಪದಾಧಿಕಾರಿಗಳು ಮತ್ತು ಮುಸ್ಲಿಂ ಸಮಾಜ ಭಾಂಧವರು ಇದ್ದರು.