ಮೂಡಲಗಿ: ‘ಮಹಾತ್ಮರೊಂದಿಗಿನ ಸತ್ಸಂಗ, ಭಜನೆ ಮತ್ತು ಪ್ರಾರ್ಥನೆ ಇವು ಮನುಷ್ಯನಿಗೆ ಶಾಂತಿ, ನೆಮ್ಮದಿಯನ್ನು ತಂದುಕೊಟ್ಟು ಜೀವನವನ್ನು ಆನಂದಮಯಗೊಳಿಸುತ್ತವೆ’ ಎಂದು ಗೋಕಾಕದ ಶೂನ್ಯ ಸಂಪಾದನಮಠದ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಇಲ್ಲಿಯ ಸಾಯಿ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನ ಇವರ ಆಶ್ರಯದಲ್ಲಿ ಜರುಗಿದ ಬೆಳದಿಂಗಳ ಸಾಹಿತ್ಯ ಚಿಂತನ ಮಂಥನ 43ನೇ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಸತ್ಯ, ಶುದ್ಧ ಮತ್ತು ಭಕ್ತಿಯಿಂದ ದೇವರನ್ನು ಸ್ಮರಿಸುವ ಮೂಲಕ ದೈವವನ್ನು ಅನುಗ್ರಹಿಸಿಕೊಳ್ಳಬೇಕು ಎಂದರು.
ಮೂಡಲಗಿಯ ಸಾಯಿ ಮಂದಿರದಲ್ಲಿ ನಿತ್ಯ ಪ್ರಾರ್ಥನೆ, ಭಜನೆ, ವೇದ ಪಠಣಗಳ ಆಚರಣೆಗಳು ನಡೆಯುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ವೈದ್ಯ ಮತ್ತು ಕಸಾಪ ಅಧ್ಯಕ್ಷ ಸಂಜಯ ಶಿಂಧಿಹಟ್ಟಿ ‘ಶರಣರ ವಚನಗಳಲ್ಲಿ ಆತ್ಮವಿಮರ್ಶೆ’ ಕುರಿತು ಮಾತನಾಡಿ ಮನುಷ್ಯ ತನ್ನ ಜೀವನದಲ್ಲಿ ತಾನು ಯಾರು ಎಂದು ಪ್ರಶ್ನಿಸಿಕೊಳ್ಳುವುದೇ ಆತ್ಮವಿಮರ್ಶೆಯಾಗಿದ್ದು. ಇದನ್ನು ವಚನ ಸಾಹಿತ್ಯವು ಸರಳ ರೀತಿಯಲ್ಲಿ ತಿಳಿಹೇಳುತ್ತದೆ. ಇದುವೇ ವಚನ ಸಾಹಿತ್ಯದ ಮೂಲದೃವ್ಯವಾಗಿದೆ ಎಂದರು.
ದೈವತ್ವವನ್ನು ಸಾಕಾರಗೊಳಿಸುವಲ್ಲಿ ಮನಸ್ಸು ಗಟ್ಟಿಯಾಗಿರಬೇಕು, ಮೌನಿಯಾಗಿರಬೇಕು, ನ್ಯೂನ್ಯತೆಗಳನ್ನು ತಿದ್ದಿಕೊಳ್ಳಬೇಕು, ಅಂತ:ಕರಣ ಶುದ್ಧಿಕರಿಸಿಕೊಂಡು ಬದುಕು ಗುಣಮಟ್ಟದಾಗಿಸಿಕೊಳ್ಳಬೇಕು. ಇದೆಲ್ಲವೂ ವಚನ ಸಾಹಿತ್ಯವು ದೊರಕಿಸಿಕೊಡುತ್ತದೆ ಎಂದರು.
ಬಟಕುರ್ಕಿಯ ಬಸವಲಿಂಗ ಸ್ವಾಮೀಜಿ ಹಾಗೂ ಅಧ್ಯಕ್ಷತೆವಹಿಸಿದ್ದ ಸಾಯಿ ಸೇವಾ ಸಮಿತಿ ಸಂಚಾಲಕ ಹಣಮಂತ ಸೊರಗಾಂವಿ ವೇದಿಕೆಯಲ್ಲಿದ್ದರು.
ಬಿ.ವೈ. ಶಿವಾಪುರ, ಎ.ಎಚ್. ಒಂಟಗೋಡಿ, ಬಸವಂತ ತರಕಾರ, ಆರ್.ಟಿ. ಲಂಕೆಪ್ಪನ್ನವರ, ಕೆ.ಬಿ. ನಾವಳ್ಳಿ, ಬಿ.ಎಂ. ನಂದಿ, ಬಟಕುರ್ಕಿ ಇದ್ದರು.
ಮಾಧವಿ ಸೋನವಾಲಕರ ಮತ್ತು ಪ್ರಶಾಂತ ಮಲ್ಲನಗೌಡರ ಪ್ರಾರ್ಥಿಸಿದರು, ಸುರೇಶ ಲಂಕೆಪ್ಪನ್ನವರ ಪ್ರಾಸ್ತಾವಿಕ ಮಾತನಾಡಿದರು, ಮಹಾವೀರ ಸಲ್ಲಾಗೋಳ ನಿರೂಪಿಸಿದರು, ಸಿ.ಎಸ್. ಮೋಹಿತೆ ವಂದಿಸಿದರು.