
ಮೂಡಲಗಿ- ದೇವರು, ತಾಯಿ-ತಂದೆ, ಪೂಜ್ಯರು ಮತ್ತು ಜನರ ಆಶೀರ್ವಾದದಿಂದ ನಾವು ಜಿಲ್ಲೆಯಲ್ಲಿಯೇ ಗಟ್ಟಿಯಾಗಿ ಜನರ ಮುಂದೆ ನಿಲ್ಲಲು ಕಾರಣವಾಗಿದೆ. ಮುಂದೆಯೂ ಸಹ ಇದೇ ಆಶೀರ್ವಾದವು ಸದಾ ಕಾಲ ನಮ್ಮೇಲಿರಲಿ ಎಂದು ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ತಾಲ್ಲೂಕಿನ ಮುನ್ಯಾಳ- ರಂಗಾಪೂರ ಮಠದಲ್ಲಿ ಶನಿವಾರದಂದು ನೂತನವಾಗಿ ಅಸ್ತಿತ್ವಕ್ಕೆ ಬಂದ ಅರಭಾವಿ ಮತಕ್ಷೇತ್ರದ ಮಠಾಧೀಶರ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಠ- ಮಾನ್ಯಗಳಿಂದ ಮಾತ್ರ ಸಮಾಜವು ಪ್ರಗತಿ ಸಾಧಿಸಲಿಕ್ಕೆ ಸಾಧ್ಯವಿದೆ ಎಂದರು.
ಸಮಾಜದ ಪರಿವರ್ತನೆಯಲ್ಲಿ ಮಠಾಧೀಶರ ಪಾತ್ರ ಮಹತ್ವದ್ದಾಗಿದ್ದು.ಈ ದಿಸೆಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಮಠಾಧೀಶರ ವೇದಿಕೆಗೆ ಸಂಪೂರ್ಣ ಸಹಾಯ, ಸಹಕಾರವನ್ನು ನೀಡುತ್ತೇನೆ.
ಕ್ಷೇತ್ರದ ಪ್ರತಿ ಹಳ್ಳಿ- ಹಳ್ಳಿಗೂ ತೆರಳಿ ಮಠಾಧೀಶರು ಧಾರ್ಮಿಕ ವಾತಾವರಣ ನಿರ್ಮಿಸಬೇಕು. ಈ ಮೂಲಕ ತಪ್ಪುತ್ತಿರುವ ಸಮಾಜವನ್ನು ಸರಿದಾರಿಗೆ ತರಬೇಕು. ದುಶ್ಚಟಗಳಿಗೆ ಮಟ್ಟ ಹಾಕಬೇಕು. ಸುಂದರ ಸಮಾಜ ನಿರ್ಮಾಣಕ್ಕೆ ಮಠಗಳು ಮುಂದಾಗಬೇಕೆಂದು ಅವರು ಸಲಹೆ ನೀಡಿದರು.
ಎಲ್ಲ ಪೂಜ್ಯರು ಸೇರಿಕೊಂಡು ಮಠಾಧೀಶರ ವೇದಿಕೆಯನ್ನು ಹುಟ್ಟುಹಾಕಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಹಿಂದೆಯೇ ಗೋಕಾಕದಲ್ಲಿ ಮುರುಘರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಇಂಥದ್ದೊಂದು ವೇದಿಕೆಯು ನಿರ್ಮಾಣವಾಗಿದ್ದನ್ನು ಸ್ಮರಿಸಿದ ಅವರು, ಮೂಡಲಗಿ ತಾಲ್ಲೂಕಿನ ಮಠಾಧೀಶರ ವೇದಿಕೆಗೆ ಸದಾ ತಮ್ಮ ಮಾರ್ಗದರ್ಶನವು ಅವಶ್ಯವಾಗಿದೆ ಎಂದು ಶ್ರೀಗಳನ್ನು ಕೋರಿದರು.

ಕನ್ಹೇರಿ ಮಠದ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ವೇದಿಕೆಯು ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡಲಿ. ಯಾವುದೇ ಜಾತಿ, ಮತಗಳಿಗೆ ಜೋತು ಬೀಳದೇ ಎಲ್ಲರನ್ನು ಸಮಾನವಾಗಿ ಕಾಣಬೇಕು. ಮೇಲು,ಕೀಳೆಂಬ ಭಾವನೆಗಳನ್ನು ತೆಗೆದು ಹಾಕಿ ಸರ್ವ ಭಕ್ತರ ಕಷ್ಟಗಳನ್ನು ಪರಿಹರಿಸುವ ಶಕ್ತಿಯನ್ನು ಆ ದೇವರು ಕರುಣಿಸಿದ್ದಾನೆ ಎಂದರು.
ಗೋಕಾಕ,ಮೂಡಲಗಿ ತಾಲ್ಲೂಕಿನಲ್ಲಿ ಹಲವು ಇತಿಹಾಸವನ್ನು ಸಾರುವ ದೊಡ್ಡದಾದ ಮಠಗಳಿವೆ. ಅಂತಹ ಮಠಗಳಿಗೆ ತಮ್ಮದೇಯಾದ ಅಪಾರ ಸಂಖ್ಯೆಯ ಭಕ್ತರಿದ್ದಾರೆ. ಅರಭಾವಿ ದುರದುಂಡೀಶ್ವರ ಮಠ, ಕೋಮು ಸಾಮರಸ್ಯ ಸಾರುವ ಸಾವಳಗಿ ಮಠ, ಶಿವಬೋಧರಂಗ ಮಠ, ಸುಣಧೊಳಿ ಮಠ ಮುಂತಾದ ಮಠಗಳಿದ್ದು, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿವೆ. ದೊಡ್ಡ ಮತ್ತು ಸಣ್ಣ ಮಠಗಳೆಂಬ ತಾರತಮ್ಯ ಮಾಡದೇ, ಅಗತ್ಯವಿರುವ ಎಲ್ಲ ನೆರವನ್ನು ನೀಡುತ್ತೇನೆ. ನಮ್ಮ ಕ್ಷೇತ್ರದಲ್ಲಿನ ಶಾಂತಿ ಸಂದೇಶವು ಇಡೀ ರಾಜ್ಯಕ್ಕೆ ವಿಸ್ತರಿಸಬೇಕು. ಈ ನಿಟ್ಟಿನಲ್ಲಿ ಪೂಜ್ಯರ ಪಾತ್ರವೂ ಅಷ್ಟೇ ಮುಖ್ಯವಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗೋಕಾಕ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ಮಠಾಧೀಶರ ವೇದಿಕೆಯ ಅಧ್ಯಕ್ಷ, ಮುನ್ಯಾಳ- ರಂಗಾಪೂರ ಮಠದ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಮಠ- ಮಂದಿರಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯವೆಂದು ಹೇಳಿದರು.
ಹುಣಶ್ಯಾಳ ಪಿ.ಜಿ ಕೈವಲ್ಯಾಶ್ರಮದ ನಿಜಗುಣ ದೇವರು, ವೇದಿಕೆಯ ಸದುದ್ದೇಶಗಳನ್ನು ವಿವರಿಸಿದರು. ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.
ವೇದಿಕೆಯಲ್ಲಿ ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು, ಹೊಸ ಯರಗುದ್ರಿಯ ಸಿದ್ಧಪ್ರಭು ಶಿವಾಚಾರ್ಯ ಮಹಾಸ್ವಾಮಿಗಳು, ಮನ್ನಿಕೇರಿಯ ವಿಜಯಸಿದ್ದೇಶ್ವರ ಮಹಾಸ್ವಾಮಿಗಳು, ಶಿವಾಪೂರ(ಹ) ಅಡವಿ ಸಿದ್ಧೇಶ್ವರ ಮಹಾಸ್ವಾಮಿಗಳು, ಯಾದವಾಡ ಚಕ್ರೇಶ್ವರ ದೇವರು ಹಡಗಿನಾಳದ ಮುತ್ತೇಶ್ವರ ಸ್ವಾಮಿಗಳು, ಜೋಕ್ಕಾನಟ್ಟಿಯ ಬಿಳಿಯಾನ ಸಿದ್ಧ ಸ್ವಾಮಿಗಳು, ಬಸವಾನಂದ ಸ್ವಾಮಿಗಳು, ಗುರುಬಸವ ಸ್ವಾಮಿಗಳು, ನಾಗನೂರಿನ ಡಾ. ಕಾವ್ಯಶ್ರೀ ಅಮ್ಮನವರು, ಕಪರಟ್ಟಿಯ ಬಸವರಾಜ ಸ್ವಾಮಿಗಳು ಸೇರಿದಂತೆ ಅರಭಾವಿ ಕ್ಷೇತ್ರದ ಅನೇಕ ಮಠಾಧೀಶರು ಉಪಸ್ಥಿತರಿದ್ದರು.
ಅರಭಾವಿ ಕ್ಷೇತ್ರದ ಮಠಾಧಿಪತಿಗಳ ನೂತನ ಪದಾಧಿಕಾರಿಗಳು ಅಧಿಕಾರವನ್ನು ಸ್ವೀಕರಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿಯವರನ್ನು ಪೂಜ್ಯರು ಪುಷ್ಪಗಳಾರ್ಪಣೆ ಮಾಡಿ ಆದರದಿಂದ ಸತ್ಕರಿಸಿದರು.
ಮಠಾಧೀಶರು ವೇದಿಕೆಯು ಸಮಾಜಮುಖಿಯಾಗಿ ಕೆಲಸ ಮಾಡಲಿ. ಸ್ವಾಮಿಗಳು ನಿಜವಾದ ಸಮಾಜ ಸೇವಕರು. ಸಮಾಜದಲ್ಲಿರುವ ಮೂಢ ನಂಬಿಕೆಗಳು, ಮೌಢ್ಯತೆಗಳನ್ನು ತೊಲಗಿಸುವ ಕೆಲಸವು ಸ್ವಾಮಿಗಳಿಂದ ನಡೆಯಬೇಕಿದೆ. ಪ್ರತಿ ಗ್ರಾಮಗಳಿಗೆ ತೆರಳಿ ಗ್ರಾಮಗಳ ನೈರ್ಮಲ್ಯಿಕರಣಕ್ಕೆ ಆದ್ಯತೆ ನೀಡಬೇಕು. ಪ್ರಸಂಗ ಬಂದರೆ ಕಸಗೂಡಿಸಲಿಕ್ಕೆ ಹಿಂಜರಿಯಬಾರದು. ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದುಕೊಂಡು ಉತ್ತಮ ಶಿಕ್ಷಣ, ಸಂಸ್ಕಾರ, ಆಚಾರ, ವಿಚಾರಗಳನ್ನು ನೀಡಬೇಕು. ಕೊಪ್ಪಳ ಗವಿ ಸಿದ್ಧೇಶ್ವರ ಮಹಾಸ್ವಾಮಿಗಳ ಮಾದರಿಯಲ್ಲಿ ಸಮಾಜ ಸೇವೆ ಮಾಡಬೇಕು.
*-ಮುರುಘರಾಜೇಂದ್ರ ಮಹಾಸ್ವಾಮಿಗಳು*
ಪೀಠಾಧಿಪತಿ,
ಶೂನ್ಯ ಸಂಪಾದನ ಮಠ, ಗೋಕಾಕ
IN MUDALGI Latest Kannada News