ಮೂಡಲಗಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ನೇ ಸಾಲಿಗಾಗಿ ಮಂಡಿಸಿರುವ ಬಜೆಟ್ ಮೂರು ವಿಶೇಷತೆಗಳನ್ನು ಹೊಂದಿದೆ. ದೇಶದ ಆರ್ಥಿಕ ಬೆಳವಣಿಗೆಗೆ ವೇಗ ನೀಡುವುದು, ಜನರ ಆಶೋತ್ತರಗಳನ್ನು ಪೂರೈಸುವುದು ಹಾಗೂ ಪ್ರತಿಯೊಬ್ಬ ನಾಗರಿಕನಿಗೂ ಸಂಪನ್ಮೂಲ ಮತ್ತು ಅವಕಾಶ ಒದಗಿಸುವುದು. ಈ ಮೂಲಕ ಉಚಿತ ಘೋಷಣೆ ಮತ್ತು ಸಾಲದ ಆಧಾರದ ರಾಜಕೀಯದ ಬದಲಾಗಿ, ಉತ್ಪಾದಕತೆ, ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವುದೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಂಕಲ್ಪವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಬಜೆಟ್ ಕುರಿತು ವಿಶ್ಲೇಸಿದರು.
ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯ ಪುನರುಜ್ಜೀವನಕ್ಕೆ ಈ ಬಜೆಟ್ ವಿಶೇಷ ಆದ್ಯತೆ ನೀಡಿದೆ. ಬಹುಭಾಷಾ ಎಐ ಆಧಾರಿತ ‘ಭಾರತ್ ವಿಸ್ತಾರ್’ ಸಾಧನದ ಮೂಲಕ ರೈತರಿಗೆ ಬೆಳೆ ಸಲಹೆ, ಅಪಾಯ ನಿರ್ವಹಣೆ ಮತ್ತು ಮಾರುಕಟ್ಟೆ ಮಾರ್ಗದರ್ಶನ ಒದಗಿಸಲಾಗುತ್ತದೆ. ಪಶು ಸಂಗೋಪನೆಗೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ, ರೈತ ಉತ್ಪಾದಕ ಸಂಸ್ಥೆಗಳ ಬಲವರ್ಧನೆ, 500 ಜಲಾಶಯಗಳ ಅಭಿವೃದ್ಧಿ ಹಾಗೂ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆ ಇವುಗಳೆಲ್ಲವೂ ರೈತರ ಆದಾಯ ವೃದ್ಧಿ ಮತ್ತು ಗ್ರಾಮೀಣ ಆರ್ಥಿಕ ಚೈತನ್ಯಕ್ಕೆ ಶಕ್ತಿ ತುಂಬಲಿವೆ. ಇದರಿಂದ ತೋಟಗಾರಿಕೆ, ಹಾಲು ಉತ್ಪಾದನೆ, ರೇಷ್ಮೆ ಹಾಗೂ ಇತರೆ ಕೃಷಿ ಆಧಾರಿತ ಉದ್ಯಮಗಳಿಗೆ ನೇರ ಲಾಭವಾಗಲಿದೆ.
ರೇಷ್ಮೆ, ಉಣ್ಣೆ, ಸೆಣಬು ಹಾಗೂ ಜವಳಿ ವಲಯಕ್ಕೆ ಸಂಬಂಧಿಸಿದ ರಾಷ್ಟ್ರೀಯ ಫೈಬರ್ ಯೋಜನೆ, ಮೆಗಾ ಟೆಕ್‌ಟೈಲ್ಸ್ ಪಾರ್ಕ್ಗಳು, ಕೈಮಗ್ಗ ಮತ್ತು ಕರಕುಶಲ ಯೋಜನೆಗಳು, ಕರ್ನಾಟಕದ ಸಾಂಪ್ರದಾಯಿಕ ಉದ್ಯೋಗಗಳಿಗೆ ಹೊಸ ಜೀವ ತುಂಬಲಿವೆ. ತೆಂಗು, ಶ್ರೀಗಂಧ, ಗೇರು ಮತ್ತು ಕೊಕೊ ಬೆಳೆಗಳಿಗೆ ಉತ್ತೇಜನ, ಕರ್ನಾಟಕದಲ್ಲಿ ಕೃಷಿ ವೈವಿಧ್ಯತೆ ಮತ್ತು ರಫ್ತು ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರಿಯಾಗಿವೆ.
ಮೂಲಸೌಕರ್ಯ ಮತ್ತು ಗ್ರಾಮೀಣ ಆರ್ಥಿಕತೆಗೆ ಈ ಬಜೆಟ್ ನೀಡಿರುವ ಕೊಡುಗೆ ಅತ್ಯಂತ ಮಹತ್ವದ್ದು ಬೆಂಗಳೂರು-ಹೈದರಾಬಾದ, ಚೆನ್ನೈ–ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ 7 ಹೈ-ಸ್ಪೀಡ್ ರೈಲು ಕಾರಿಡಾರ್‌ಗಳ ಘೋಷಣೆ, ಗ್ರಾಮಾಂತರ ಪ್ರದೇಶದ ಕೈಗಾರಿಕೆ, ವ್ಯಾಪಾರ, ಉದ್ಯೋಗ ಹಾಗೂ ಹೂಡಿಕೆ ಚಟುವಟಿಕೆಗಳಿಗೆ ಅಪಾರ ಅವಕಾಶಗಳನ್ನು ಸೃಷ್ಟಿಸಲಿದೆ. ಇದು ನಮ್ಮ ಯುವಕರಿಗೆ ಉದ್ಯೋಗ, ರೈತರಿಗೆ ಮಾರುಕಟ್ಟೆ ಮತ್ತು ಉದ್ಯಮಿಗಳಿಗೆ ವಿಸ್ತರಣೆಯ ಹೊಸ ದಾರಿಗಳನ್ನು ತೆರೆಯಲಿದೆ.
ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂ.ಎಸ್.ಎಂ.ಇ) ನೀಡಿರುವ ಬಲಿಷ್ಠ ಬೆಂಬಲ, 2 ಮತ್ತು 3ನೇ ಹಂತದ ನಗರಗಳ ಆರ್ಥಿಕ ಚಟುವಟಿಕೆಗಳನ್ನು ವೇಗಗೊಳಿಸಲಿದೆ. ಕಾರ್ಪೊರೇಟ್ ಮಿತ್ರ ಯೋಜನೆ, ಸ್ವಾವಲಂಬಿ ಭಾರತ ನಿಧಿಯಡಿ ರೂ 4,000 ಕೋಟಿ ನೆರವು ಹಾಗೂ ಸೆಮಿಕಂಡಕ್ಟರ್ ವಲಯಕ್ಕೆ ರೂ 40,000 ಕೋಟಿ ಮೀಸಲು, ಇವುಗಳು ಬೆಂಗಳೂರು ಮತ್ತು ಕರ್ನಾಟಕವನ್ನು ಜಾಗತಿಕ ಕೈಗಾರಿಕಾ ನಕ್ಷೆಯಲ್ಲಿ ಮತ್ತಷ್ಟು ಬಲಿಷ್ಠವಾಗಿ ಸ್ಥಾಪಿಸಲಿವೆ.
ಆರೋಗ್ಯ ಮತ್ತು ಸಾಮಾಜಿಕ ಮೂಲಸೌಕರ್ಯಕ್ಕೆ ನೀಡಿರುವ ಒತ್ತು, ಜಿಲ್ಲಾ ಆಸ್ಪತ್ರೆಗಳ ಮೇಲ್ದರ್ಜೆಗೇರಿಕೆ, ಅಪಘಾತ ಚಿಕಿತ್ಸಾ ಕೇಂದ್ರಗಳ ವಿಸ್ತರಣೆ, ಬಾಲಕಿಯರಿಗಾಗಿ ಪ್ರತಿ ಜಿಲ್ಲೆಯಲ್ಲಿ ಹಾಸ್ಟೆಲ್ ನಿರ್ಮಾಣ, ಇವುಗಳು ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳ ಸೃಷ್ಟಿಗೆ ಮೋದಿ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ.
ತೆರಿಗೆ ಸರಳೀಕರಣದ ಮೂಲಕ ಮಧ್ಯಮ ವರ್ಗ ಮತ್ತು ಉದ್ಯಮಿಗಳಿಗೆ ಮಹತ್ವದ ರಿಲೀಫ್ ನೀಡಲಾಗಿದೆ. ಆದಾಯ ತೆರಿಗೆ ಸಲ್ಲಿಕೆಯಲ್ಲಿ ವಿಳಂಬಕ್ಕೆ ಕ್ರಿಮಿನಲ್ ಶಿಕ್ಷೆ ರದ್ದು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಟಿಸಿಎಸ ದರ 5% ರಿಂದ 2% ಕ್ಕೆ ಇಳಿಕೆ, ಹೊಸ ಐಟಿ ಕಾಯ್ದೆಯ ಮೂಲಕ ಸರಳ ಮತ್ತು ಪಾರದರ್ಶಕ ತೆರಿಗೆ ವ್ಯವಸ್ಥೆ ಇವೆಲ್ಲವೂ ಜನಸ್ನೇಹಿ ಆಡಳಿತದ ಸ್ಪಷ್ಟ ಸಂಕೇತವಾಗಿದೆ.
ಒಟ್ಟಾರೆ 2026–27 ನೇ ಸಾಲಿನ ಕೇಂದ್ರ ಬಜೆಟ್ ಸಾಮಾನ್ಯ ಜನರ ಆಶೋತ್ತರ, ರೈತರ ಸಂಕಲ್ಪ, ಯುವಕರ ಕನಸು ಮತ್ತು ಉದ್ಯಮಿಗಳ ಗುರಿಗಳನ್ನು ಒಂದೇ ಮಾರ್ಗದಲ್ಲಿ ಒಗ್ಗೂಡಿಸುವ ಸಮಗ್ರ ಅಭಿವೃದ್ಧಿಯ ದಸ್ತಾವೇಜು. ವಿಕಸಿತ ಭಾರತದ ಸಂಕಲ್ಪಕ್ಕೆ ಮತ್ತಷ್ಟು ವೇಗ ನೀಡುವ ಬಜೆಟ್ ಮಂಡಿಸಿದ ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಅತ್ಯಂತ ಆಶಾದಾಯಕವಾಗಿದೆ ಎಂದು ಬಜೆಟ್ ನಲ್ಲಿರುವ ಅಂಶಗಳನ್ನು ಕೊಂಡಾಡಿದರು.
IN MUDALGI Latest Kannada News