ವಿಜ್ಞಾನಿಗಳು ರೈತರಾದರೆ ನಾಡು ಧನ್ಯ: ಚಂದ್ರಶೇಖರ ಅಕ್ಕಿ
ಗೋಕಾಕ: ನಾಡು ಸಮೃದ್ಧಿಯಾಗಿ ಬೆಳೆಯಲು ರೈತರ ಪರಿಶ್ರಮ ಅನನ್ಯವಾದದ್ದು ಹೀಗಾಗಿ ರೈತರು ವಿಜ್ಞಾನಿಗಳಾಗುವುದಕ್ಕಿಂತ ವಿಜ್ಞಾನಿಗಳೇ ರೈತರಾದರೆ ದೇಶ ಮತ್ತಷ್ಟು ವಿಪುಲವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಪ್ರೊ. ಚಂದ್ರಶೇಖರ ಅಕ್ಕಿ ಹೇಳಿದರು.
ಅವರು ಬುಧವಾರ ದಂದು ಜರುಗಿದ ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕೋವಿಡ್ 2019 ಲಾಕ್ಡೌನ್ ನಿಮಿತ್ಯ ಗೂಗಲ್ ನಲ್ಲಿ ಸೇಮಿನಾರ ಅಲ್ಲ ವೆಬಿನಾರ ವಿಶೇಷ ಉಪನ್ಯಾಸ ಮಾಲಿಕೆಗಳ ಸಮಾಲೋಚನೆ ಹಾಗೂ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ, ಸಾಹಿತ್ಯ, ಸಂಗೀತ, ಸಂಸ್ಕೃತಿ ನಿಂತ ನೀರಾಗದೆ ನಿರಂತರ ಹರಿವಂತಾಗಬೇಕು. ಉಪನ್ಯಾಸಗಳಿಂದ ತಲೆಯೊಳಗೆ ಹೋದ ವಿಷಯ ಬೀಜವಾಗಿ ಅಂಕುರಗೊಂಡು ಬಳ್ಳಿ ಅದರಿಂದ ಹೂವಾಗಿ ವಸ್ತು ಸಾಕಾರಗೊಳ್ಳಬೇಕು. ಇಡಿಯಾಗಿ ನೋಡಿದರೆ ವೇಬಿನಾರ್ ಕಾರ್ಯಕ್ರಮ ಸಾರ್ಥಕತೆಯನ್ನು ಕಂಡಿದೆ ಎಂದರು.
ಕಲಾವಿದ ಸಾಹಿತಿ ಪ್ರಾ. ಜಯಾನಂದ ಮಾದರ ಸಂಘಟನೆ ಮತ್ತು ಸಂಚಾಲಕತ್ವದಲ್ಲಿ ಮೂಡಿಬಂದ ಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿಗಳಾಗಿ ಹಿಡಕಲ್ ನ ಸಾಹಿತಿ ಚಿಂತಕ ಶ್ರೀ ಶಂಕರ ಕ್ಯಾಸ್ತಿ, ಸಾಹಿತಿ ಹಾಗೂ ನೃತ್ಯ ಕಲಾವಿದೆ ಶ್ರೀಮತಿ ರಜನಿ ಜೀರಗ್ಯಾಳ, ನಮ್ಮ ಬೆಳಗಾವಿ ವಾರಪತ್ರಿಕೆ ಸಂಪಾದಕ- ಬರಹಗಾರ ಶ್ರೀ ಸಾದಿಕ್ ಹಲ್ಯಾಳ ಮಾತನಾಡಿದರು.
ಗೋಕಾಕ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತನ ಅಧ್ಯಕ್ಷರು ಹಾಗೂ ಗಣ್ಯರಾದ ಶ್ರೀ ಮಹಾಂತೇಶ ತಾಂವಶಿ ಅಧ್ಯಕ್ಷತೆ ನುಡಿಯಾಡಿ, ಇನ್ನಷ್ಟು ಇಂತಹ ವೆಬಿನಾರ್ ಗಳು ಈ ವೇದಿಕೆ ಮೂಲಕ ಮೂಡಿ ಬರಲಿ ಎಂದರು.
ಅಧ್ಯಾಪಕಿ ಪ್ರೊ. ವಿದ್ಯಾ ರಡ್ಡಿ ವಂದಿಸಿದರು.