ಅಧಿಕ ಅಶ್ವೀಜ ಮಾಸದ ನಿಮಿತ್ತ ಒಂದು ತಿಂಗಳ ಪರ್ಯಂತರ ಸೆ. 18ರಿಂದ ‘ಅರುಹಿನ ಅರಮನೆ ಮತ್ತು ಕೋವಿಡ್ ಅರಿವು’ ಕಾರ್ಯಕ್ರಮ
ಮೂಡಲಗಿ: ಸಮೀಪದ ಮುನ್ಯಾಳ-ರಂಗಾಪುರದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಅಧಿಕ ಅಶ್ವೀಜ ಮಾಸದ ನಿಮಿತ್ತವಾಗಿ ಸೆ. 18ರಿಂದ ಅ. 15ರ ವರೆಗೆ ಪ್ರತಿದಿನ ಬೆಳಿಗ್ಗೆ 8ರಿಂದ 9ರವರೆಗೆ ಮನೆಯಿಂದ ಮನೆಗೆ ‘ಅರುಹಿನ ಅರಮನೆ ಹಾಗೂ ಕೋವಿಡ್-19ರ ಜಾಗೃತಿ’ ಕಾರ್ಯಕ್ರಮವನ್ನು ಏರ್ಪಡಿಸಿರುವರು. ಮೂಡಲಗಿ ಪಟ್ಟಣ ಸೇರಿದಂತೆ ಮುನ್ಯಾಳ, ರಂಗಾಪುರ, ಶಿವಾಪುರ, ಖಾನಟ್ಟಿ, ಕಮಲದಿನ್ನಿ ಗ್ರಾಮಗಳ ವಿವಿಧ ಭಕ್ತರ ಆತಿಥ್ಯದಲ್ಲಿ ಅವರ ಮನೆ ಅಂಗಳದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮುನ್ಯಾಳದ ಮಹಾಯೋಗಿ ವೇಮನ್ ಆಧ್ಯಾತ್ಮಿಕ ಕುಟೀರದ ಲಕ್ಷ್ಮಣ ದೇವರು ನಿತ್ಯ ಪ್ರವಚನ ನೀಡುವರು ಎಂದು ಸಂಘಟಕರಾದ ಡಾ. ಕೆ.ಎಚ್. ನಾಗರಾಜ ಹಾಗೂ ಪ್ರವೀಣ ಹುಕ್ಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದ್ಘಾಟನೆ: ಸೆ. 18ರಂದು ಬೆಳಿಗ್ಗೆ 8 ಗಂಟೆಗೆ ಮುನ್ಯಾಳ ಗ್ರಾಮದ ಮರಡಿಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಉದ್ಘಾಟನೆ ಜರುಗುವುದು. ಮುನ್ಯಾಳದ ಮಹಾಯೋಗಿ ವೇಮನ್ ಆಧ್ಯಾತ್ಮಿಕ ಕುಟೀರದ ಲಕ್ಷ್ಮಣ ದೇವರು, ಮೂಡಲಗಿಯ ಸಿಪಿಐ ವೆಂಕಟೇಶ ಮುರನಾಳ, ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಬಾಲಶೇಖರ ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಸಂಘಟಕರು ತಿಳಿಸಿದ್ದಾರೆ.