‘ಸಮಾಜದ ಸ್ವಾಸ್ಥ್ಯಕ್ಕೆ ಶಾಂತಿ, ಸಹಬಾಳ್ವೆ ಬೇಕು’
ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯರ ನುಡಿ
ಮೂಡಲಗಿ: ‘ಎಲ್ಲ ಧರ್ಮಗಳ ಸಾರ ಒಂದೇ ಆಗಿದ್ದು, ಸರ್ವ ಧರ್ಮಗಳನ್ನು ಗೌರವಿಸುವ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು’ ಎಂದು ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಸದಾಶಿವಯೋಗೀಶ್ವರ ಮಠದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮುನ್ಯಾಳ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ಹಮ್ಮಿಕೊಂಡಿರುವ ‘ಮನೆ, ಮನೆಗೆ ಅರುಹಿನ ಅರಮನೆ ಪ್ರವಚನ ಮತ್ತು ಕೋವಿಡ್ ಅರಿವು’ ಅಭಿಯಾನದ ಮುಸ್ಲಿಂ ಸಮಾಜದ ಆತಿಥ್ಯದಲ್ಲಿ ನಡೆದ 6ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಾಂತಿ, ಸಹಬಾಳ್ವೆ ಇದ್ದಲ್ಲಿ ಮಾತ್ರ ಸಮಾಜವು ಸ್ವಾಸ್ಥ್ಯದಿಂದ ಇರುತ್ತದೆ ಎಂದರು.
ಲಾಕ್‍ಡೌನ್ ಸಡಿಲಿಕೆಯನ್ನು ಜನರು ದುರುಪಯೋಗಪಡಿಸಿಕೊಳ್ಳಬಾರದು, ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ಎಚ್ಚರಿವಹಿಸಿಕೊಂಡು ಕೊರೊನಾ ಸೋಂಕಿನಿಂದ ಮುಕ್ತರಾಗಬೇಕು ಎಂದರು.
ಪ್ರವಚನಕಾರ ಶರಣ ಲಕ್ಷ್ಮಣ ದೇವರು ಮಾತನಾಡಿ ಜಾತಿ, ಧರ್ಮ, ಮತ ಎಂದು ಮನುಷ್ಯರು ತಾವೇ ಮಾಡಿಕೊಂಡಿದ್ದು, ಮಾನವ ಕುಲ ಒಂದೇ ಎಂದು ಶರಣರು, ಸಂತರು ಪ್ರತಿಪಾದಿಸಿದ್ದಾರೆ. ಶರಣರ ನುಡಿಯಂತೆ ನಡೆದರೆ ಸಾಮರಸ್ಯತೆ ಬೆಳೆಯುತ್ತದೆ ಎಂದರು. ಶತಾಯುಷಿ ಅವಮ್ಮ ಹುಸೇನಸಾಬ ನದಾಫ ಅವರನ್ನು ಶ್ರೀಗಳು ಸನ್ಮಾನಿಸಿದರು ಗಾಯಕ ಆಯೂಬ ಕಲಾರಕೊಪ್ಪ ಪವಿತ್ರ ಕುರಾನ್‍ದ ಶ್ಲೋಕ್‍ಗಳನ್ನು ಸುಶ್ರಾವ್ಯವಾಗಿ ಹೇಳಿ ಭಾವೈಕ್ಯತೆಯ ಕಂಪನು ಬೀರಿದರು.
ಮುಸ್ಲಿಂ ಸಮಾಜದ ಶತಾಯುಷಿ ಅವಮ್ಮ ಹುಸೇನಸಾಬ ನದಾಫ ಅವರನ್ನು ಶ್ರೀಗಳು ಶ್ರೀರಕ್ಷೆ ನೀಡಿ ಗೌರವಿಸಿದರು.
ಅತಿಥಿ ಆನಂದರಾವ ನಾಯ್ಕ್ ಮಾತನಾಡಿದರು.
ಪ್ರಾರಂಭದಲ್ಲಿ ಕಾರ್ತಿಕಶಾಸ್ತ್ರೀ, ವೀರಯ್ಯಶಾಸ್ತ್ರೀಗಳು ಮಂತ್ರಘೋಷ ಪಠಣ ಮಾಡಿದರು.
ಹುಸೇನಸಾಬ ನದಾಫ, ಇಮಾಮ್‍ಸಾಬ ನದಾಫ್, ಮೀರಾಸಾಬ ನದಾಫ, ದುಂಡಪ್ಪ ಬಿ. ಪಾಟೀಲ, ಮಹಾದೇವ ಉರಬಿನವರ, ನಾಗಪ್ಪ ಕೋಮಾರ, ರಾಮಣ್ಣ ಅಮಾತಿ ಉಪಸ್ಥಿತರಿದ್ದರು.
ಡಾ. ಕೆ.ಎಚ್. ನಾಗರಾಳ ನಿರೂಪಿಸಿದರು, ಶಿಕ್ಷಕ ಪ್ರವೀಣ ಹುಕ್ಕೇರಿ ವಂದಿಸಿದರು.