ಮೂಡಲಗಿ ಸಮೀಪದ ಮುನ್ಯಾಳದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ‘ಮನೆ, ಮನೆಗೆ ಆಧ್ಯಾತ್ಮಿಕ ಪ್ರವಚನ’ ದ 13ನೇ ದಿನದ ಕಾರ್ಯಕ್ರಮದಲ್ಲಿ ಡಾ. ಚೇತನ ಮುರಗೋಡ ಮಾತನಾಡಿದರು
ಅಧಿಕ ಮಾಸದ 13ನೇ ದಿನ:
ಡಾ. ಚೇತನ ಮುರಗೋಡ ಸಲಹೆ
‘ಕೊರೊನಾ ಸೋಂಕು ಬಗ್ಗೆ ನಿರ್ಲಕ್ಷತೆ ಮಾಡಬಾರದು’
ಮೂಡಲಗಿ: ‘ಜನರು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಂಡು ಕೊರೊನಾ ಸೋಂಕು ಬಾರದಂತೆ ಎಚ್ಚರಿಕೆವಹಿಸಬೇಕು’ ಎಂದು ಹಳ್ಳೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೇತನ ಮುರಗೋಡ ಹೇಳಿದರು.
ತಾಲ್ಲೂಕಿನ ಮುನ್ಯಾಳ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ಹಮ್ಮಿಕೊಂಡಿರುವ ‘ಮನೆ, ಮನೆಗೆ ಅರುಹಿನ ಅರಮನೆ ಪ್ರವಚನ ಮತ್ತು ಕೋವಿಡ್ ಅರಿವು’ ಅಭಿಯಾನದ ನಿಂಗಮ್ಮದೇವಿ ದೇವಸ್ಥಾನದ ಸಮುದಾಯ ಜನರ ಆತಿಥ್ಯದಲ್ಲಿ ನಡೆದ 13ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
ಕೊರೊನಾ ಸೋಂಕು ಬಗ್ಗೆ ನಿರ್ಲಕ್ಷಿಸಬಾರದು ಎಂದರು.
ಸರ್ಕಾರವು ಪ್ರತಿಯೊಂದು ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ವ್ಯವಸ್ಥೆ ಮಾಡಿದೆ. ಕೊರೊನಾದ ತೀವ್ರತೆ ಇದ್ದವರನ್ನು ಕೊವಿಡ್ ಕೇಂದ್ರಗಳಲ್ಲಿ ಉತ್ತಮ ರೀತಿಯಲ್ಲಿ ಚಿಕಿತ್ಸೆ ದೊರೆಯುತ್ತದೆ. ಅಂಥ ಚಿಕಿತ್ಸಾ ಸೌಲಭ್ಯಗಳನ್ನು ಪಡೆದು ಆರೋಗ್ಯಪೂರ್ಣವಾದ ಜೀವನವನ್ನು ಅನುಭವಿಸಬೇಕು ಎಂದರು.
ಅಂಗನವಾಡಿ ಮೇಲ್ವಿಚಾರಕರಾದ ಚಾಂದಬೀಬಿ ಕುಡಚಿ (ಡಾಂಗೆ) ಮಾತನಾಡಿ ಗರ್ಭಿಣಿ ಮಹಿಳೆಯರು ಸೇವಿಸಬೇಕಾದ ಪೌಷ್ಠಿಕ ಆಹಾರಗಳ ಕುರಿತು ಮಾತನಾಡಿ ‘ಸದೃಢ ತಾಯಿಯಿದ್ದಲ್ಲಿ ಸದೃಢವಾದ ಶಿಶುಗಳ ಜನನವಾಗಿ ಶಕ್ತಿಶಾಲಿ ದೇಶವಾಗುತ್ತದೆ. ಗರ್ಭಿಣಿ ಸ್ತೀಯರು ಹಾಗೂ ಬಾಣಂತಿಯರು ಆಹಾರ ಮತ್ತು ಶುಚಿತ್ವದ ಬಗ್ಗೆ ನಿರ್ಲಕ್ಷತೆ ಮಾಡಬಾರದು’ ಎಂದರು.
ಜಾನಪದ ಗಾಯಕ ಶಬ್ಬೀರ ಡಾಂಗೆ ಅವರು ‘ಸಾವಿನ ಮನೆಯಾಯ್ತು 2020, ಮನುಕುಲಕ್ಕೆ ತಂದಿತು ಕೊರೊನಾ ಆಪತ್ತು’ ಕೊರೊನಾ ಕುರಿತು ಹಾಡಿದ ಹಾಡು ಎಲ್ಲರೂ ತಲೆದೂಗುವಂತೆ ಮಾಡಿತು.
ಪ್ರವಚನಕಾರ ಶರಣ ಲಕ್ಷ್ಮಣ ದೇವರು ಆಧ್ಯಾತ್ಮಿಕ ಪ್ರವಚನ ನೀಡಿದರು.
ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಸದಾಶಿವಯೋಗೀಶ್ವರ ಮಠದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಅತಿಥಿ ಆನಂದರಾವ ನಾಯ್ಕ್, ಹಣಮಂತ ಗೋಡಿಗೌಡರ, ಎ.ಎಚ್. ವಂಟಗೋಡಿ ಮಾತನಾಡಿದರು.
ರಮೇಶ ಗೋಡಿಗೌಡರ, ಹಣಮಂತ ತಳವಾರ, ಈರಪ್ಪ ಅಂಬಿ, ಪ್ರಕಾಶ ಬಿ.ಪಾಟೀಲ, ಮಲ್ಲಪ್ಪ ಗೋಡಿಗೌಡರ ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಕಾರ್ತಿಕಶಾಸ್ತ್ರೀ, ವೀರಯ್ಯಶಾಸ್ತ್ರೀಗಳು ಮಂತ್ರಘೋಷ ಪಠಣ ಮಾಡಿದರು. ಐಶ್ವರ್ಯ ತಳವಾರ ಪ್ರಾರ್ಥಿಸಿದರು.
ಡಾ. ಕೆ.ಎಚ್. ನಾಗರಾಳ ಪ್ರಾಸ್ತಾವಿಕ ಮಾತನಾಡಿ ನಿರೂಪಿಸಿದರು, ಶಿಕ್ಷಕ ಪ್ರವೀಣ ಹುಕ್ಕೇರಿ ವಂದಿಸಿದರು.