ಮೂಡಲಗಿ ಸಮೀಪದ ಮುನ್ಯಾಳದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ‘ಮನೆ, ಮನೆಗೆ ಆಧ್ಯಾತ್ಮಿಕ ಪ್ರವಚನ’ ದ 19ನೇ ದಿನದ ಕಾರ್ಯಕ್ರಮದಲ್ಲಿ ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಸದಾಶಿವಯೋಗೀಶ್ವರ ಮಠದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು
ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯರ ನುಡಿ
‘ಕಾಯವೇ ಕೈಲಾಸವನ್ನಾಗಿಸಿಕೊಂಡು ಬದುಕಿನ ಸಾರ್ಥಕತೆ ಕಾಣಬೇಕು’
ಮೂಡಲಗಿ: ‘ಮನುಷ್ಯನ ಬದುಕಿನ ಎಲ್ಲ ಚಟುವಟಿಕೆಗಳಿಗೆ ದೇಹವೇ ಮೂಲವಾಗಿದ್ದು, ದೇವಾಲಯಕ್ಕಿಂತ ದೇಹವೇ ಶ್ರೇಷ್ಠ ಎಂದು ಬಸವಣ್ಣನವರು ಪ್ರತಿಪಾದಿಸಿದ್ದರು’ ಎಂದು ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಸದಾಶಿವಯೋಗೀಶ್ವರ ಮಠದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮುನ್ಯಾಳ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ಹಮ್ಮಿಕೊಂಡಿರುವ ‘ಮನೆ, ಮನೆಗೆ ಅರುಹಿನ ಅರಮನೆ ಪ್ರವಚನ ಮತ್ತು ಕೋವಿಡ್ ಅರಿವು’ ಅಭಿಯಾನದ ಸತ್ಯಪ್ಪ ಭೀಮಪ್ಪ ಗೋಡಿಗೌಡರ ಕುಟುಂಬದವರ ಆತಿಥ್ಯದಲ್ಲಿ ಮಂಗಳವಾರ ಜರುಗಿದ 19ನೇ ದಿನದ ಆಧ್ಯಾತ್ಮಿಕ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು ಕಾಯವೇ ಕೈಲಾಸವನ್ನಾಗಿಸಿಕೊಂಡಾಗ ಜ್ಞಾನೋದಯ ಪ್ರಾಪ್ತವಾಗುತ್ತದೆ, ಅರಿವು ಮೂಡುತ್ತದೆ ಎಂದರು.
ಬಡತನ ಸಿರಿವಂತಿಕೆ, ಮೇಲು, ಕೀಳು ಎನ್ನುವ ಮನೋಭಾವ ಇಲ್ಲವಾಗಬೇಕು. ದೇವಾಲಯವನ್ನು ನಿರ್ಮಿಸಲು ಸಾಧ್ಯವಾಗದಿದ್ದರೂ ದೇಹವನ್ನೇ ದೇವಾಲಯವನ್ನಾಗಿಸಿಕೊಂಡು ದೈವಭಕ್ತನಾಗಿ ಸುಂದರ ಬದುಕನ್ನು ಕಾಣಬೇಕು ಎಂದರು.
ಪ್ರವಚನಕಾರ ಶರಣ ಲಕ್ಷ್ಮಣ ದೇವರು ಅಕ್ಕನ ವಚನ ಕುರಿತು ಮಾತನಾಡಿ ತನ್ನನ್ನು ತಾನು ಅರಿಯಬೇಕಾದರೆ ಗುರುವಿನ ಸತ್ಸಂಗ ಮತ್ತು ಮಾರ್ಗದರ್ಶನವಾಗಬೇಕು ಎಂದರು.
ಅತಿಥಿಗಳಾದ ಆನಂದರಾವ ನಾಯ್ಕ್, ಮಹಾದೇವ ಸೂರಣ್ಣವರ, ಹಣಮಂತ ಗೋಡಿಗೌಡರ, ಎ.ಎಚ್. ಒಂಟಗೋಡಿ ಕೊರೊನಾ ಸೋಂಕು ಹರಡದಂತೆ ಮುಂಜಾಗೃತೆ ಕುರಿತು ಮಾತನಾಡಿದರು.
ಸತ್ಯಪ್ಪ ಗೋಡಿಗೌಡರ, ಅಲ್ಲಪ್ಪ ಗೋಡಿಗೌಡರ, ನಾಗಪ್ಪ ಗೋಡಿಗೌಡರ, ಸಿದ್ದನಗೌಡ ಗೋಡಿಗೌಡರ ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಕಾರ್ತಿಕಶಾಸ್ತ್ರೀ, ವೀರಯ್ಯಶಾಸ್ತ್ರೀಗಳು ಮಂತ್ರಘೋಷ ಪಠಣ ಮಾಡಿದರು. ಐಶ್ವರ್ಯ ಹಣಮಂತ ತಳವಾರ ಪ್ರಾರ್ಥಿಸಿದರು.
ಡಾ. ಕೆ.ಎಚ್. ನಾಗರಾಳ ಪ್ರಾಸ್ತಾವಿಕ ಮಾತನಾಡಿ ನಿರೂಪಿಸಿದರು.