‘ಭಾರತೀಯ ರಾಷ್ಟ್ರೀಯ ಏಕತೆಯು ವಿಶ್ವಕ್ಕೆ ಮಾದರಿಯಾಗಿದೆ’
ಮೂಡಲಗಿ: ‘ಭಾರತ ದೇಶವು ವಿವಿಧತೆಯಲ್ಲಿ ಏಕತೆ ಸಾಧಿಸಿರುವುದು ಇಡೀ ವಿಶ್ವಕ್ಕೆ ಮಾದರಿಯಾಗಿದೆ’ ಎಂದು ಸಾಹಿತಿ ಬಾಲಶೇಖರ ಬಂದಿ ಹೇಳಿದರು.
ಇಲ್ಲಿಯ ಮಂಜುನಾಥ ಶಿಕ್ಷಣ ಸಂಸ್ಥೆಯ ಆತಿಥ್ಯದಲ್ಲಿ ಮೂಡಲಗಿ ಪೊಲೀಸ್ ಇಲಾಖೆಯಿಂದ ಆಚರಿಸಿದ ರಾಷ್ಟ್ರೀಯ ಏಕತಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಏಕತೆಯು ಯಾರದೇ ಒತ್ತಾಯಕ್ಕಾಗಿ ಇರದೆ ಪ್ರತಿಯೊಬ್ಬ ಭಾರತೀಯ ಪ್ರಜೆಯ ಅಂತರಾತ್ಮದ ಬದ್ಧತೆಯಾಗಿರಬೇಕು ಎಂದರು.
ಏಕತೆ ದಿನಾಚರಣೆಯನ್ನು ಭಾರತ ದೇಶವನ್ನು ಒಂದುಗೂಡಿಸಿದ ಸರ್ದಾರ ವಲ್ಲಭಬಾಯಿ ಪಟೇಲ್ ಅವರ ಜನ್ಮ ದಿನಕ್ಕಾಗಿ ಆಚರಿಸಲಾಗುತ್ತಿದೆ. ಜಾತಿ, ಧರ್ಮ, ಪಂಥ, ಮೇಲು, ಕೀಳು ಎನ್ನುವ ಕಟ್ಟಳೆ ಇಲ್ಲಿ ಇರಬಾರದು ಎಂದರು.
ರಾಜ್ಯಗಳ ಮಧ್ಯದಲ್ಲಿ ಹಲವಾರು ದಶಕಗಳಿಂದ ಉಳಿದ ಬಂದಿರುವ ಗಡಿ ಸಮಸ್ಯೆ, ನದಿಗಳ ನೀರು ಹಂಚಿಕೆಯ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವ ಮೂಲಕ ದೇಶದ ಆಂತರಿಕ ಏಕತೆಯನ್ನು ಇನ್ನಷ್ಟು ಬಲಿಷ್ಠಗೊಳಿಸಬಹುದು ಎಂದರು.
ಅಧ್ಯಕ್ಷತೆವಹಿಸಿದ್ದ ಸಿಪಿಐ ವೆಂಕಟೇಶ ಮುರನಾಳ ಮಾತನಾಡಿ ಏಕತೆಯಲ್ಲಿ ದೇಶದ ಅಭಿವೃದ್ಧಿಯೊಂದಿಗೆ ದೇಶವು ಸುರಕ್ಷತೆ ಮತ್ತು ಸದೃಢವಾಗಿ ಇರಲು ಸಾಧ್ಯ ಎಂದರು.
ಭಾರತದಲ್ಲಿ ಸಂಸ್ಕøತಿ, ಆಚರಣೆ, ಉಡುಗೆ, ತೊಡುಗೆ, ಆಹಾರ ಪದ್ದತಿ ಹಾಗೂ ಭಾಷೆಯು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶದಲ್ಲಿ ಭಿನ್ನತೆ ಇದ್ದಾಗ್ಯೂ ಸಹ ಏಕತೆಯು ಎಲ್ಲವನ್ನು ಒಂದುಗೂಡಿಸುತ್ತದೆ ಎಂದರು.
ಪಿಎಸ್‍ಐ ಮಲ್ಲಿಕಾರ್ಜುನ ಸಿಂಧೂರ ಪ್ರಾಸ್ತಾವಿಕ ಮಾತನಾಡಿದರು.
ಮಂಜುನಾಥ ಕುಂಬಾರ, ಅಯೂಬ ಕಲಾರಕೊಪ್ಪ, ರಾಮಣ್ಣ ಮಂಟೂರ, ಸಿದ್ರಾಮ ಡೊಳ್ಳಿ ಇದ್ದರು.
ಮಹ್ಮದಖೈಪ್ ಕಲಾರಕೊಪ್ಪ ಮತ್ತು ಅನಿತಾ ವಂಟಗೋಡಿ ಏಕತೆ ಕುರಿತು ಗಾಯನ ಮಾಡಿದರು.
ಮಂಜುನಾಥ ಸಂಸ್ಥೆ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ ಸ್ವಾಗತಿಸಿದರು, ಶಶಿಧರ ಆರಾಧ್ಯ ನಿರೂಪಿಸಿದರು.
ಏಕತಾ ಓಟ: ಬೆಳಿಗ್ಗೆ ಸಿಪಿಐ ಹಾಗೂ ಪಿಎಸ್‍ಐ ಮತ್ತು ಪೊಲೀಸ್ ಸಿಬ್ಬಂದಿಯವರ ನೇತೃತ್ವದಲ್ಲಿ ಪುರಸಭೆ ಸದಸ್ಯರು, ಯುವಕ ಸಂಘಗಳ ಯುವಕರು, ಸೈನಿಕ ತರಬೇತಿ ಕೇಂದ್ರ ಪ್ರಶಿಕ್ಷಣಾರ್ಥಿಗಳೊಂದಿಗೆ ನಾಲ್ಕು ಕಿ.ಮೀ. ರೂರದಷ್ಟು ‘ಏಕತಾ ಓಟ’ ಮಾಡಿ ಜನರಲ್ಲಿ ಏಕತೆ ಕುರಿತು ಜಾಗೃತಿ ಮೂಡಿಸಿದರು.