ಎಸ್‍ಎಸ್‍ಎಲ್‍ಸಿ ಸಾಧಕ ವಿದ್ಯಾರ್ಥಿಗಳಿಗೆ ಲ್ಯಾಪ್‍ಟ್ಯಾಪ್ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ.
ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಪ್ರಥಮಾಧ್ಯತೆ.-ಬಾಲಚಂದ್ರ ಜಾರಕಿಹೊಳಿ ಹೇಳಿಕೆ.
ಗೋಕಾಕ: ಅರಭಾಂವಿ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಪ್ರಾಶಸ್ತ್ಯ ನೀಡುತ್ತಿದ್ದು, ಶಿಕ್ಷಣದ ಅಮೂಲಾಗ್ರ ಬದಲಾವಣೆಗೆ ಕಳೆದ 15ವರ್ಷಗಳಿಂದ ಶ್ರಮಿಸಲಾಗುತ್ತಿದೆ. ಈ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳ ಸಾಧನೆ ಅಪಾರವಾಗಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೂಡಲಗಿ ವಲಯದ ವಿದ್ಯಾರ್ಥಿನಿಯೋರ್ವಳು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುವುದು ಹೆಮ್ಮೆಯನ್ನುಂಟು ಮಾಡಿದೆ ಎಂದು ಶಾಸಕ ಮತ್ತು ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಸೋಮವಾರ ಸಂಜೆ ಮೂಡಲಗಿ ವಲಯಕ್ಕೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೆಮ್ಮೆಯ ಸಾಧನೆಗೈದ ಮೂವರು ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಲ್ಯಾಪ್‍ಟ್ಯಾಪ್ ಮತ್ತು 13 ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸ್ಮರಣಿಕೆ ಹಾಗೂ 25ಸಾವಿರ ರೂಗಳ ನಗದನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ಮೂಡಲಗಿ ವಲಯವು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಸಾಧನೆ ಮಾಡುತ್ತಲೇ ಇದೆ. ಮಾರ್ಚ-23 ರಂದು ನಡೆಯಬೇಕಿದ್ದ ಪರೀಕ್ಷೆಗಳು ಕೋವಿಡ್-19 ಕಾರಣದಿಂದ ಮುಂದೂಡಲಾಯಿತು. ಇದರಿಂದ ವಿದ್ಯಾರ್ಥಿಗಳಿಗೆ ಸ್ವಲ್ಪ ಮಟ್ಟಿಗೆ ನಿರುತ್ಸಾಹವಾಯಿತು. ಆದರೂ ಈ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಲೇಬೇಕು. ಅದರಲ್ಲೂ ಮಲ್ಲಾಪೂರ ಪಿ.ಜಿ. ವಿದ್ಯಾರ್ಥಿನಿ ಶೃತಿ ಬಸಗೌಡ ಪಾಟೀಲ 625 ಅಂಕಗಳ ಪೈಕಿ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುವುದು ಹಾಗೂ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಬಂದಿರುವುದು ವಲಯಕ್ಕೆ ಹರ್ಷದ ಸಂಗತಿ ಎಂದು ಹೇಳಿದರು.
ವಲಯದ ವಿದ್ಯಾರ್ಥಿಗಳ ಸಾಧನೆಗೆ ಸ್ವತ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ ಅವರು ಅಪಾರ ಸಂತಸ ವ್ಯಕ್ತಪಡಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿರುವುದು ವಲಯದ ಕೀರ್ತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ.ಮನ್ನಿಕೇರಿ ಮಾತನಾಡಿ, ಮೂಡಲಗಿ ವಲಯದ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿ ಹಂತದಲ್ಲೂ ನಮ್ಮೊಂದಿಗೆ ಕೈಜೋಡಿಸುತ್ತಿರುವ ಶಾಸಕರ ಕಾಳಜಿಗೆ ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹಳ್ಳೂರ ಶಿವಾಪೂರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅಕ್ಷತಾ ಕಲ್ಲಪ್ಪ ಸಾಯಣ್ಣವರ, ಕೊಪದಟ್ಟಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ರಾಜು ಭೀಮಪ್ಪ ಬಡಿಗೇರ, ಮೂಡಲಗಿಯ ಕೆ.ಎಚ್.ಸೋನವಾಲ್ಕರ ಪ್ರೌಢಶಾಲೆಯ ತೇಜಸ್ವಿನಿ ಈರಪ್ಪ ಮಾಲಗಾರ ಅವರಿಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನೀಡಿರುವ ಲ್ಯಾಪ್‍ಟ್ಯಾಪ್ ಮತ್ತು ಅಭಿನಂದನಾ ಪತ್ರಗಳನ್ನು ವಿತರಿಸಿದರು.
2019ರ ಮಾರ್ಚ್ ತಿಂಗಳಿನಲ್ಲಿ ಜರುಗಿದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇಕಡಾ 100ರಷ್ಟು ಫಲಿತಾಂಶವನ್ನು ದಾಖಲಿಸಿದ 11 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ 25ಸಾವಿರ ನಗದು ಹಾಗೂ 2 ಅನುದಾನ ರಹಿತ ಶಾಲೆಗಳಿಗೆ ಸ್ಮರಣಿಕೆ ಹಾಗೂ ಅಭಿನಂದನಾ ಪತ್ರಗಳನ್ನು ಶಾಸಕರು ವಿತರಿಸಿದರು.
ವೇದಿಕೆಯಲ್ಲಿ ಟಿಎಪಿಸಿಎಮ್‍ಎಸ್ ಅಧ್ಯಕ್ಷ ಅಶೋಕ ನಾಯಿಕ, ಜಿ.ಪಂ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಸದಸ್ಯೆ ಶಶಿಕಲಾ ಸಣ್ಣಕ್ಕಿ, ಪಿ.ಎಲ್.ಬಬಲಿ ಇದ್ದರು.