ಕಲ್ಲೋಳಿ ಸಂವಿಧಾನ ದಿನ ಆಚರಣೆ
ಕಲ್ಲೋಳಿ: ನಮ್ಮ ದೇಶದ ಸಂವಿಧಾನ ಜಗತ್ತಿನ ಅತೀ ದೊಡ್ಡ ಮತ್ತು ಯಶಸ್ವಿ ಪ್ರಜಾಪ್ರಭುತ್ವದ ಸಂವಿಧಾನವಾಗಿದೆ. ಭಾರತೀಯ ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳನ್ನು ಅನುಭವಿಸುವುದು ಮಾತ್ರವಲ್ಲದೇ ಮೂಲಭೂತ ಕರ್ತವ್ಯಗಳ ಪಾಲನೆ ಮಾಡುವುದರಿಂದ ಸಂವಿಧಾನ ದಿನ ಆಚರಣೆಯ ಸಾರ್ಥಕತೆಯಾಗುತ್ತದೆ ಎಂದು ಮೂಡಲಗಿಯ ಶ್ರೀ ಶ್ರೀ ಶ್ರೀಪಾದ ಬೋಧ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ. ಪಿ. ಚೇತನ್ ರಾಜ ಅಭಿಪ್ರಾಯಪಟ್ಟರು.
ಗುರುವಾರ ಕಲ್ಲೋಳಿ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರಾಜ್ಯಶಾಸ್ತ್ರ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಗೂಗಲ್ ಮಿಟ್ ಅಂತರ್ಜಾಲದ ಮೂಲಕ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಸಂವಿಧಾನದ ರಚನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಮಹತ್ವ ಪಾತ್ರವಹಿಸಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪ ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಮಾತನಾಡಿ, ಎಲ್ಲ ವರ್ಗಗಳ ಸ್ವಾತಂತ್ರ್ಯ ವನ್ನು ರಕ್ಷಿಸುವ ಮತ್ತು ಜಾತಿ, ಮತ, ಪಥ, ಪ್ರದೇಶ ಮತ್ತು ಭಾಷೆಯ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡದೇ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಸಿಗಬೇಕು ಎಂಬುದು ಡಾ. ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದರು.
ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ಎಸ್. ಎಮ್. ಐಹೊಳೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಪ್ರೊ. ಶಂಕರ ನಿಂಗನೂರ ನಿರೂಪಿಸಿ, ವಂದಿಸಿದರು.