ಬೆಟಗೇರಿ:ನಮ್ಮ ದೇಶದ ವಿಜ್ಞಾನಿಗಳು ತಯಾರಿಸಿದ ಕೋವಿಡ್-19 ಲಸಿಕೆ ಬಗ್ಗೆ ವಿಶ್ವವೇ ಹೆಮ್ಮೆಪಡುತ್ತಿದೆ. ಕೋವಿಶೀಲ್ಡ್ ಲಸಿಕೆಯಿಂದ ಅಡ್ಡ ಪರಿಣಾಮಗಳು ಆಗುವುದು ತುಂಬಾ ವಿರಳ, ಇದು ಸುರಕ್ಷಿತವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜೇಶ್ವರಿ ಹಿರೇಮಠ ತಿಳಿಸಿದರು.
ಗೋಕಾಕ ತಾಲೂಕಿನ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರದಂದು ನಡೆದ ಕೋವಿಶೀಲ್ಡ್ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಈಗ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕೋವಿಶೀಲ್ಡ್ ಲಸಿಕೆ ಬಗ್ಗೆ ಭಯ ಬೇಡ, ಯಾವುದೇ ಹಿಂಜರಿಕೆಯಿಲ್ಲದೇ ಸಾರ್ವಜನಿಕರು ಕರೊನಾ ಲಸಿಕೆ ಪಡೆಯಿರಿ ಎಂದರು.
ಬೆಟಗೇರಿ ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ ಕೋವಿಶೀಲ್ಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇಲ್ಲಿಯ ಲಸಿಕೆ ನೀಡುವ ಕೇಂದ್ರದಲ್ಲಿ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡ ಫಲಾನುಭವಿಗಳನ್ನು ಕೆಲ ಗಂಟೆಗಳ ಕಾಲ ತಮ್ಮ ನಿಗಾದಲ್ಲಿರಿಸಿಕೊಂಡು ನಂತರ ಮನೆಗೆ ಕಳುಹಿಸಲಾಯಿತು. ಯಾರಿಗೂ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ವೈದ್ಯಾಧಿಕಾರಿ ರಾಜೇಶ್ವರಿ ಹಿರೇಮಠ ತಿಳಿಸಿದ್ದಾರೆ.
ಸ್ಥಳೀಯ ಪಿಎಚ್‍ಸಿ ವೈದ್ಯಾಧಿಕಾರಿ ಭುವನೇಶ್ವರಿ ಚೆನ್ನಾಳ, ಡಾ.ಲಕ್ಷ್ಮಣ ಖವಟಕೊಪ್ಪ, ಸರೋಜಾ ಬಿಸನಾಳ, ರವಿ ಹೊಳ್ಳಿಕೇರಿ, ಗ್ರಾಪಂ ಮಾಜಿ ಅಧ್ಯಕ್ಷ ಈಶ್ವರ ಬಳಿಗಾರ, ಕುಲಗೋಡ ಪೊಲೀಸ್ ಠಾಣೆಯ ಸ್ಥಳೀಯ ಬೀಟ್ ಪೇದೆ ಬ್ರಹ್ಮಾನಂದ ಬಿರಾದಾರ, ಪ್ರಕಾಶ ಗುಡದಾರ, ಗುರಪ್ಪ ಆನೆಗುಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಪಿಎಚ್‍ಸಿ ಸಿಬ್ಬಂದಿ, ಸ್ಕೌಟ್ ಮತ್ತು ಗೈಡ್ ಸ್ವಯಂ ಸೇವಕರು, ಇತರರು ಇದ್ದರು.