ಬೆಳಗಾವಿ: ಬೆಳಗಾವಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಜನರ ಅನುಕೂಲಕ್ಕಾಗಿ ಗೋವಾ-ಮಂಗಳೂರ ಮತ್ತು ಮೈಸೂರ ಈ ಮೂರು ನಗರಗಳಿಗೆ ರೈಲು ಓಡಾಟ ಆರಂಭಿಸಬೇಕು ಇದರಿಂದ ಉತ್ತರ ಕರ್ನಾಟಕದ ಜನತೆಯ ವ್ಯಾಪಾರ, ವಾಣಿಜ್ಯ ವೃದ್ಧಿಯ ಜೊತೆಗೆ ಶಿಕ್ಷಣ ಮತ್ತು ಪ್ರವಾಸಿ ತಾಣಗಳ ವೀಕ್ಷಣೆಗೆ ಪೂರಕ ವಾತಾವರಣ ರೂಪಿಸಿದಂತೆ ಆಗುತ್ತದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಹುಬ್ಬಳ್ಳಿ ರೈಲ್ವೆ ವಿಭಾಗದ ಪ್ರಧಾನ ವ್ಯವಸ್ಥಾಪಕರ ಕಛೇರಿಯಲ್ಲಿ ಶನಿವಾರ (ಜ.23) ರಂದು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಬೆಳಗಾವಿ-ಬೆಂಗಳೂರು ಸೂಪರ ಫಾಸ್ಟ್ ರೈಲು ಸಂಚಾರವನ್ನು ಮೈಸೂರವರೆಗೆ ವಿಸ್ತರಿಸಬೇಕು, ಜೊತೆಗೆ ಮಂಗಳೂರ ರೈಲು ಪ್ರಾರಂಭಿಸುವ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ಮತ್ತು ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿದಂತಾಗುತ್ತದೆ ಹಾಗೂ ಗೋವಾ ರೈಲು ಪ್ರಾರಂಭಿಸುವ ಮೂಲಕ ಈ ಭಾಗದ ರೈತರ ತರಕಾರಿ ಮತ್ತು ಹಾಲು ಉತ್ಪಾದಕರಿಗೆ ಅನುಕೂಲ ಕಲ್ಪಿಸಿದಂತಾಗುತ್ತದೆ. ಈ ಮಾರ್ಗದಲ್ಲಿ ಈ ಹಿಂದೆ ಮೀಟರ್ ಗೆಜ್ ಮಾರ್ಗದಲ್ಲಿ ರೈಲು ಓಡಾಡುತ್ತಿದ್ದವು ಬ್ರಾಡ್ ಗೆಜ್ ಮಾರ್ಗ ನಿರ್ಮಾಣವಾದ ನಂತರ ಈ ರೈಲುಗಳನ್ನು ನಿಲ್ಲಿಸಲಾಗಿದ್ದು ಅವುಗಳನ್ನು ಮರಳಿ ಪ್ರಾರಂಭಿಸುವ ಮೂಲಕ ಉತ್ತರ ಕರ್ನಾಟಕದ ಜನರ ಬೇಡಿಕೆ ಸ್ಪಂದಿಸಬೇಕಾಗಿ ಆಗ್ರಹಿಸಿದರು.
ಹುಬ್ಬಳ್ಳಿ-ಮೀರಜ್ ರೈಲ್ವೆ ಮಾರ್ಗದ ದ್ವಿಪಥ ಕಾಮಗಾರಿಯನ್ನು ತ್ವರಿತಗೊಳಿಸುವ ಮೂಲಕ ಹೆಚ್ಚಿನ ರೈಲುಗಳ ಓಡಾಟಕ್ಕೆ ಅನುಕೂಲ ಕಲ್ಪಿಸದಂತಾಗಬೇಕು ಜೊತೆಗೆ ಈ ಮಾರ್ಗದಲ್ಲಿರುವ ಎಲ್ಲಾ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಿ ಕಾಮಗಾರಿಯನ್ನು ಕೂಡ ತ್ವರೀತ ಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಸೂಚಿಸಿದರು. ಬೆಂಗಳೂರು ನಂತರ ಅತಿ ಹೆಚ್ಚು ಜನ ಓಡಾಟದ ನಗರವಾಗಿ ಬೆಳೆಯುತ್ತಿರುವ ಬೆಳಗಾವಿಗೆ ರೈಲ್ವೆ ಇಲಾಖೆ ವಿಶೇಷ ಗಮನ ನೀಡಬೇಕಾಗಿ ಒತ್ತಾಯಿಸಿದರು.
ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಿಭಾಗದ ಭೌಗೊಳಿಕ ವ್ಯಾಪ್ತಿ ವಿಜಯನಗರದವರೆಗೆ ಮಾತ್ರ ಇದ್ದು ಅದನ್ನು ಮಿರೆಜ್‍ವರೆಗೆ ವಿಸ್ತರಿಸುವ ಮೂಲಕ ಹುಬ್ಬಳ್ಳಿ ಮಿರಿಜ್ ಪಾಂಸೆಂಜರ್ ರೈಲು ಓಡಾಟವನ್ನು ಪ್ರಾರಂಭಿಸಬೇಕಾಗಿ ಸೂಚಿಸಿದರು.
ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಿಭಾಗಿಯ ಪ್ರಧಾನ ವ್ಯವಸ್ಥಾಪಕರಾದ ಎ.ಕೆ. ಸಿಂಗ್, ವ್ಯವಸ್ಥಾಪಕರಾದ ಅರವಿಂದ ಮಾಳಕಡೆ, ಪಿ.ಸಿ.ಸಿ.ಎಂ. ಅನಿಲ್ ಪವಿತ್ರನ್, ಸಿ.ಪಿ.ಟಿ.ಎಂ. ಎಚ್. ಎಂ. ದಿನೇಶ, ಟಿ.ವಿ. ಭುಶನ್, ಪಿ.ಆರ್.ಒ ಶ್ರೀಮತಿ ವಿಜಯಾ ಹಾಗೂ ಗಣ್ಯರಾದ ಪಿ.ಎನ್. ಮುಳ್ಳೂರ, ಬಸವರಾಜ ಹುಳ್ಳೇರ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
