ಬೆಟಗೇರಿ:ಮನುಷ್ಯನು ಪಂಚಯಿಂದ್ರಿಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡು ಧೃಢ ನಿರ್ಧಾರದ ಮನಸ್ಸು ಮಾಡಿದರೆ ಏನೆಲ್ಲಾ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಮಹಾಮಾರಿ ಕರೊನಾಗೆ ಭಾರತ ದೇಶ ಲಸಿಕೆ ತಯಾರಿಸಿ ವಿಶ್ವಕ್ಕೆ ನೀಡುತ್ತಿರುವುದು ದೇಶದ ಹೆಮ್ಮೆಯ ಸಂಗತಿಯಾಗಿದೆ ಎಂದು ಖ್ಯಾತ ವಾಗ್ಮಿ, ಚಿಂತಕ ಹಾಗೂ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆ ಮತ್ತು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಯುವ ಬ್ರಿಗೇಡ್ ಇವರ ಸಹಯೋಗದೊಂದಿಗೆ ಸ್ಥಳೀಯ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ಫೆ.13ರಂದು ವಿಜ್ಞಾನ ಉದ್ಯಾನವನ ಅಡಿಗಲ್ಲು ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿ, ಬೆಳಗಾವಿ ವಿಟಿಯು ಸಹಯೋಗದಲ್ಲಿ ಶಾಲೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ವಿಜ್ಞಾನ ಉದ್ಯಾನವನದ ಸದುಪಯೋಗವನ್ನು ಸ್ಥಳೀಯ ಶಾಲಾ ಮಕ್ಕಳು ಪಡೆದುಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ತಮ್ಮ ಸಂಕಲ್ಪದ ಗುರಿ ತಲುಪಲು ಎಷ್ಟೇ ಕಷ್ಟ ಬಂದರೂ ಛಲ ಬಿಡದೇ ಎದುರಿಸಿ ಸಾಧನೆಯ ಫಲ ಸರಾಗವಾಗಿ ಫಲಿಸುತ್ತದೆ. ಸ್ಥಳೀಯ ವಿದ್ಯಾರ್ಥಿಗಳು ವಿವಿಧ ವಲಯದಲ್ಲಿ ಮಹತ್ತರ ಸಾಧನೆಗೈದು, ಹುಟ್ಟೂರಿನ, ನಾಡಿನ ಹಾಗೂ ದೇಶದ ಕೀರ್ತಿ ತರುವಂತವರಾಗಬೇಕು. ಸಾಧಕರ ಸಾಧನೆಗಳ ಕುರಿತು ಶಾಲಾ ಮಕ್ಕಳಿಗೆ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.
ಸುಣಧೋಳಿ ಜಡಿಸಿದ್ಧೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮಿಜಿ ಸಾನಿಧ್ಯ, ಸ್ಥಳೀಯ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ.ಕರಿಸಿದ್ದಪ್ಪ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಶ್ರೀಗಳು, ಗಣ್ಯರು, ಅತಿಥಿಗಳನ್ನು ಶಾಲು ಹೊದಿಸಿ ಸತ್ಕರಿಸಲಾಯಿತು. ಶಾಲಾ ಮಕ್ಕಳು, ಚಿತ್ರಕಲಾ ಶಿಕ್ಷಕ ಗಣಪತಿ ಭಾಗೋಜಿ ತಮ್ಮ ಕೈಚಳಕದಲ್ಲಿ ಬಿಡಿಸಿದ ಭಾವಚಿತ್ರಗಳನ್ನು ಸೂಲಿಬೆಲೆ ಅವರಿಗೆ ನೀಡಿದರು.
ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಅಪ್ಪಾಸಾಹೇಬ, ಮಹೇಶ ಬೆಂಡಿಗೇರಿ, ವರ್ಧಮಾನ ತ್ಯಾಗಿ, ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಬಸವರಾಜ ಪಣದಿ, ಎಂ.ಐ.ನೀಲಣ್ಣವರ, ಶಿವಾಜಿ ನೀಲಣ್ಣವರ, ಈರಯ್ಯ ಹಿರೇಮಠ, ರಾಮಣ್ಣ ಮುಧೋಳ, ರಾಮಪ್ಪ ಬಳಿಗಾರ, ಚಂದ್ರಶೇಖರ ನೀಲಣ್ಣವರ, ಶಿವರಾಜ ಪತ್ತಾರ, ಶಂಭು ಹಿರೇಮಠ, ವಿಜಯ ಹಿರೇಮಠ, ಶಿವು ನಾಯ್ಕರ, ಶಿವು ದೇಯಣ್ಣವರ, ನಾಗೇಶ ಬೆಳಗಲಿ, ಭರಮಪ್ಪ ಪೂಜೇರಿ, ವೀರಭದ್ರ ದೇಯಣ್ಣವರ, ಮಂಜು ಪತ್ತಾರ, ರಾಘು ಬೆಟಗೇರಿ, ಸ್ಥಳೀಯ ಯುವ ಬ್ರಿಗೇಡ್ ಸದಸ್ಯರು, ಪ್ರೌಢ ಶಾಲೆಯ ಎಸ್‍ಡಿಎಂಸಿ ಸದಸ್ಯರು, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಗಣ್ಯರು, ಇತರರು ಇದ್ದರು.