ಬರಡು ರಾಸುಗಳ ಉಚಿತ ತಪಾಸಣಾ ಶಿಬಿರ
ಮೂಡಲಗಿ: ‘ರೈತರು ಹೈನುಗಾರಿಕೆ ಮಾಡುವ ಮೂಲಕ ಸಾವಯವ ಕೃಷಿಗೆ ಆದ್ಯತೆ ನೀಡಬೇಕು’ ಎಂದು ಮೂಡಲಗಿಯ ಪಶು ಸಂಗೋಪನಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ಎಂ.ಬಿ. ವಿಭೂತಿ ಹೇಳಿದರು.
ಇಲ್ಲಿಯ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯೊಂದಿಗೆ ಲಯನ್ಸ್ ಕ್ಲಬ್ ಪರಿವಾರದಿಂದ ಆಯೋಜಿಸಿದ ಬರಡು ರಾಸುಗಳ ಚಿಕಿತ್ಸಾ ಶಿಬಿರ ಹಾಗೂ ಕರುಗಳಿಗೆ ಜಂತು ನಾಶಕ ಔಷಧಿ ವಿತರಣಾ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು ಸಾವಯವ ಹಾಲು ಉತ್ಪಾದಿಸುವುದು ಉತ್ತಮ ಆದಾಯ ತರುವ ಮೂಲವಾಗಿದೆ ಎಂದರು.
ಪಶುಗಳಿಗೆ ರೋಗಗಳು ಬರದಂತೆ ಮುಂಜಾಗೃತ ಕ್ರಮವನ್ನು ತೆಗೆದುಕೊಳ್ಳಬೇಕು ಎಂದರು.
ಪಶು ವೈದ್ಯಾಧಿಕಾರಿಗಳಾದ ಡಾ. ಬಸವರಾಜ ಎಸ್. ಗೌಡರ ಮತ್ತು ಡಾ. ಪ್ರಶಾಂತ ಕುರಬೇಟ ಮಾತನಾಡಿ ಗಿಣ್ಣದ ಹಾಲಿನ್ನು ಕರುಗಳಿಗೆ ಕೊಡುವ ಬಗ್ಗೆ ಮತ್ತು ದನಗಳ ಕೊಟ್ಟಿಯಲ್ಲಿ ಉಣ್ಣೆ ನಿಯಂತ್ರಣ ಬಗ್ಗೆ ತಿಳಿಸಿದರು.
ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ ಅಧ್ಯಕ್ಷ ಪುಲಕೇಶ ಸೋನವಾಲಕರ ಮಾತನಾಡಿ ರೈತರು ಪಶುಗಳ ಆರೈಕೆ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂದರು.
ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು.
ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಜೋನ್ ಜಿಲ್ಲಾಧ್ಯಕ್ಷ ಶ್ರೀಶೈಲ್ ಲೋಕನ್ನವರ, ಸಂಜಯ ಮೋಕಾಶಿ, ಡಾ. ಎಸ್.ಎಸ್. ಶೆಟ್ಟಿ, ಸುರೇಶ ದೇಸಾಯಿ, ಸುಪ್ರೀತ ಸೋನವಾಲಕರ, ವಿಶಾಲ ಶೀಲವಂತ, ಗಿರೀಶ ಆಸಂಗಿ, ಜಾನುವಾರ ಅಧಿಕಾರಿ ಎ.ವಿ. ಅಧಿಕಾರಿ, ಶಂಕರ ಶಾಬನ್ನವರ, ಮಹಾಂತೇಶ ಹೊಸೂರ, ರವೀಂದ್ರ ಯಡವನ್ನವರ ಇದ್ದರು.