ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನ ವೃದ್ಧಿಸಿಕೊಳ್ಳುವುದು ಅಗತ್ಯ: ರಮೇಶ ಗೊಂಗಡಿ
ತುಕ್ಕಾನಟ್ಟಿ: ವ್ಯಕ್ತಿತ್ವ ಎಂಬುದು ಅನೇಕ ಶಕ್ತಿಗಳ ಸಂಗಮ. ಆದರ್ಶ,ಸದಾಚಾರ,ಶ್ರದ್ಧೆ, ನಿಷ್ಠೆ, ದಕ್ಷತೆ, ಎಚ್ಚರ-ಸನ್ನಿವೇಶಗಳೊಡನೆ ಹೊಂದಿಕೊಳ್ಳುವ ಸಾಮರ್ಥ್ಯ, ವೃತ್ತಿಪ್ರಿಯತೆ,ಪರೋಪಕಾರ ಬುದ್ಧಿ,ಪ್ರಾಮಾಣಿಕತೆಗಳು ವ್ಯಕ್ತಿತ್ವ ನಿರ್ಮಿಸುವ ಶಕ್ತಿಗಳು.ಈ ನಿಟ್ಟಿನಲ್ಲಿ ನೋಡಿದಾಗ ನಮಗೆ ವ್ಯಕ್ತಿ ಮುಖ್ಯವಲ್ಲ ವ್ಯಕ್ತಿತ್ವ ಮುಖ್ಯ ಎಂದು ಬೆಳಗಾವಿಯ ಎ.ಪಿ.ಡಿ. ಸಂಸ್ಥೆಯ ಮಾನವ ಸಂಪನ್ಮೂಲ ನೊಡಲ್ ಅಧಿಕಾರಿ ರಮೇಶ ಗೊಂಗಡಿ ನುಡಿದರು. ಅವರು ಇತ್ತೀಚೆಗೆ ತುಕ್ಕಾನಟ್ಟಿಯ ಬಡ್ಸ್ ಸಮಾಜಕಾರ್ಯ ಪದವಿ ಮಹಾವಿದ್ಯಾಲಯ ಸಮಾಜ ಕಾರ್ಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ೨೦೨೦-೨೧ ನೇ ಸಾಲಿನ ಸಮಾಜಕಾರ್ಯ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮ ದಲ್ಲಿ ಅತಿಥಿಯಾಗಿ ಆಗಮಿಸಿ ಮಾತನಾಡುತ್ತಾ,
ಹೂವಿಗೆ ಪರಿಮಳವಿದ್ದಂತೆ ,ಮಾನವರಿಗೆ ವ್ಯಕ್ತಿತ್ವ ಅಷ್ಟೇ ಮುಖ್ಯ. ಪ್ರತಿಯೊಬ್ಬರ ಜೀವನದ ಒಳಿತು ಕೆಡಕುಗಳಿಗೆ ಅವರೇ ಶಿಲ್ಪಿಗಳಾಗಿರುತ್ತಾರೆ. ಮನುಷ್ಯ ತನ್ನ ಜೀವನವನ್ನು ತನ್ನಿಷ್ಟದಂತೆ ರೂಪಿಸಿಕೊಳ್ಳುತ್ತಾನೆ, ಅಂದರೆ ತನ್ನೆಲ್ಲ ಆಲೋಚನೆಗಳ ವಸ್ತುರೂಪವೇ ಮಾನವನಾಗಿರುತ್ತಾನೆ. ವ್ಯಕ್ತಿತ್ವವೆಂಬುದು ಹುಟ್ಟಿನಿಂದ ಸಾವಿನವರೆಗೆ ರೂಪುಗೊಳ್ಳುತ್ತಿರುತ್ತದೆ. ವ್ಯಕ್ತಿತ್ವ ವಿಕಸನಗೊಳ್ಳಲು ಪ್ರಮುಖವಾಗಿ ಭೌದ್ದಿಕ, ಭೌತಿಕ, ಭಾವನಾತ್ಮಕ, ಮಾನಸಿಕ, ನೈತಿಕ ಹಾಗೂ ಆಧ್ಯಾತ್ಮಿಕ ಈ ಆರು ವಿಷಯಗಳಲ್ಲಿ ತನ್ನದೇ ಆದ ಪ್ರಭುತ್ವವನ್ನು ಸಾಧಿಸಿಕೊಳ್ಳಬೇಕಾಗುತ್ತದೆ ಎಂದ ಅವರು ಸಮಾಜಕಾರ್ಯ ಪದವಿ ಪಡೆದ ವಿದ್ಯಾರ್ಥಿಗಳಿಗೆ ಕೈಗಾರಿಕೆ, ಆಸ್ಪತ್ರೆ ಹಾಗೂ ಎನ್.ಜಿ.ಓ ಗಳಲ್ಲಿ ಸೇವೆಸಲ್ಲಿಸುವ ಅವಕಾಶಗಳಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪ್ರೊ. ಬಿ.ಕೆ.ಬರ್ಲಾಯ ವಹಿಸಿ ಮಾತನಾಡಿದರು.
ಪ್ರಥಮೇಶ ಪಾಟೀಲ ನಿರೂಪಿಸಿದರು. ಮಂಜುನಾಥ ಗೊರಗುದ್ದಿ ವಂದಿಸಿದರು.
IN MUDALGI Latest Kannada News