ಬೆಟಗೇರಿ:ಪ್ರತಿಯೊಬ್ಬರೂ ಶಿವನಾಮಸ್ಮರಣೆ ಮಾಡಿ ತಮ್ಮ ಜೀವನ ಪಾವನ ಮಾಡಿಕೊಳ್ಳಬೇಕು. ರಾತ್ರಿಗಳಲ್ಲಿ ಮಹಾಶಿವರಾತ್ರಿ ಶ್ರೇಷ್ಠವಾಗಿದೆ ಎಂದು ಶಿರಕೊಳ ಹಿರೇಮಠದ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಜಿ ಹೇಳಿದರು.
ಸಮೀಪದ ಮಮದಾಪೂರ ಗ್ರಾಮದ ಮೌನ ಮಲ್ಲಿಕಾರ್ಜುನ ಮಠದಲ್ಲಿ ಬುಧವಾರದಂದು ಶಿವಾನುಭವ ಉದ್ಘಾಟನೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಸಕಲ ಜೀವಿಗಳ ಜನ್ಮದಲ್ಲಿ ಮಾನವ ಜನ್ಮ ಅತ್ಯಂತ ಶ್ರೇಷ್ಠವಾಗಿದ್ದರಿಂದ ಸಾರ್ಥಕತೆಯಿಂದ ಬದುಕಬೇಕೆಂದರು.
ಮಮದಾಪೂರದ ಮೌನ ಮಲ್ಲಿಕಾರ್ಜುನ ಮಹಾಸ್ವಾಮಿಜಿ ಅವರ ಶ್ರೀಮಠದಲ್ಲಿ ಅಖಂಡ ಶಿವನಾಮಸ್ಮರಣೆ ಆರಂಭವಾಗಿ 4 ವರ್ಷ ಗತಿಸಿ, 5ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಪ್ರಯುಕ್ತ ಮಮದಾಪೂರ ಶ್ರೀಮಠದಲ್ಲಿ 5 ದಿನಗಳ ಕಾಲ ಶಿವಾನುಭವ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡಿದ್ದನ್ನು ಶ್ಲಾಘಿಸಿದರು.
ಮಮದಾಪೂರದ ಮೌನ ಮಲ್ಲಿಕಾರ್ಜುನ ಶ್ರೀಮಠದ ಮೌನ ಮಲ್ಲಿಕಾರ್ಜುನ ಮಹಾಶಿವಯೋಗಿಗಳು ಅಧ್ಯಕ್ಷತೆ ವಹಿಸಿದ್ದರು. ಚುಳಕಿ ವೀರಸಂಗಯ್ಯ ಸ್ವಾಮಿಜಿ ಸಮ್ಮುಖ ವಹಿಸಿ ಮಾತನಾಡಿದರು. ಶಿರಕೊಳ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಜಿ ಜ್ಯೋತಿ ಪ್ರಜ್ವಲಿಸುವ ಮೂಲಕ ಶಿವಾನುಭವ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಹರ, ಗುರು, ಚರಮೂರ್ತಿಗಳನ್ನು, ದಾನಿಗಳನ್ನು, ಗಣ್ಯರನ್ನು ಶಾಲು ಹೊದಿಸಿ ಸತ್ಕರಿಸಲಾಯಿತು.
ಶಲವಡಿ ವೀರಯ್ಯ ಶಾಸ್ತ್ರೀಗಳು, ಜಿ.ಜಿ.ಮುರ್ತೇಲಿ, ಈಶ್ವರಪ್ಪ ಸಿದ್ದಾಪೂರ, ಅಕ್ಬರ್ ನದಾಫ್, ಮಂಜುನಾಥ ಶರಣರು, ಶ್ರೀಶೈಲ ಶರಣರು, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಹರ-ಗುರು, ಚರಮೂರ್ತಿಗಳು, ಸಂತ-ಶರಣರು, ಗಣ್ಯರು, ಶಿವಾನುಭವ ಕಾರ್ಯಕ್ರಮ ಆಯೋಜಕ ಸಮಿತಿ ಸದಸ್ಯರು, ಶ್ರೀಮಠದ ಭಕ್ತರು ಇದ್ದರು.
