ಉದಗಟ್ಟಿ ಉದ್ದಮ್ಮದೇವಿ ಜಾತ್ರಾ ಮಹೋತ್ಸವ ಸಂಪೂರ್ಣ ರದ್ದು; ಡಿವೈಎಸ್‍ಪಿ ಜಾವೀದ ಇನಾಮದಾರ
ಬೆಟಗೇರಿ: ಮಹಾಮಾರಿ ಕರೊನಾ 2ನೇ ಅಲೆಯಿಂದ ಕರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆ ಹಾಗೂ ಬೆಳಗಾವಿ ಲೋಕಸಭಾ ಉಪ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿದ್ದರಿಂದ ರಾಜ್ಯ ಸರ್ಕಾರದ ಆದೇಶದನುಸಾರ ಗೋಕಾಕ ತಾಲೂಕಿನ ಉದಗಟ್ಟಿ ಗ್ರಾಮದ ಉದ್ದಮ್ಮದೇವಿ ಜಾತ್ರಾ ಮಹೋತ್ಸವ ಸಂಪೂರ್ಣ ರದ್ದು ಮಾಡಲಾಗಿದೆ ಎಂದು ಗೋಕಾಕ ಡಿವೈಎಸ್‍ಪಿ ಜಾವೀದ ಇನಾಮದಾರ ಹೇಳಿದರು.
ಗೋಕಾಕ ತಾಲೂಕಾಡಳಿತ ಮತ್ತು ಗೋಕಾಕ ಮತ್ತು ಮೂಡಲಗಿ ಹಾಗೂ ಕುಲಗೋಡ ಪೊಲೀಸ್ ಇಲಾಖೆ ಸಹಯೋಗದಲ್ಲಿ ಉದಗಟ್ಟಿ ಗ್ರಾಮದಲ್ಲಿ ಶನಿವಾರದಂದು ನಡೆದ ಪ್ರಸಕ್ತ ವರ್ಷದ ಉದ್ದಮ್ಮದೇವಿ ಜಾತ್ರಾ ಮಹೋತ್ಸವ ಸಂಪೂರ್ಣ ರದ್ದುಗೊಳಿಸುವಂತೆ ಸ್ಥಳೀಯರಿಗೆ ತಿಳುವಳಿಕೆ ನೀಡುವ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಏ.12ರಿಂದ ಏ.16ರವರೆಗೆ ನಡೆಯಬೇಕಿದ್ದ ಪ್ರಸಕ್ತ ವರ್ಷದ ಉದ್ದಮ್ಮಾದೇವಿ ಜಾತ್ರಾ ಮತ್ತು ರಥೋತ್ಸವ ರದ್ದು ಮಾಡಲಾಗಿದ್ದು ಸ್ಥಳೀಯರು, ಭಕ್ತರು ಸಹಕರಿಸಬೇಕು. ಒಂದು ವೇಳೆ ಸರ್ಕಾರದ ಆದೇಶದಂತೆ ನಿಯಮಗಳನ್ನು ಪಾಲನೆ ಮಾಡದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಕುಲಗೋಡ ಪೊಲೀಸ್ ಠಾಣೆ ಪಿಎಸ್‍ಐ ಹನುಮಂತ ನರಳೆ ಮಾತನಾಡಿ, ಉದಗಟ್ಟಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಉದ್ದಮ್ಮಾದೇವಿ ಜಾತ್ರೆ ಇರುವುದಾಗಿ ತಿಳಿದುಬಂದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಈ ವರ್ಷದ ಜಾತ್ರಾ ಮಹೋತ್ಸವವನ್ನು ಸಂಪೂರ್ಣ ರದ್ದು ಪಡಿಸಲಾಗಿದೆ. ಸ್ಥಳೀಯರು ಸಹಕಾರ ನೀಡಬೇಕು. ಸರ್ಕಾರದ ನಿರ್ದೇಶನದಂತೆ ಧಾರ್ಮಿಕ ಹಬ್ಬ, ಜಾತ್ರಾಮಹೋತ್ಸವ, ಸಮಾರಂಭ, ವಿವಿಧ ಆಚರಣೆಗಳನ್ನು ಹಾಗೂ ಸಾರ್ವಜನಿಕರು ಗುಂಪು ಸೇರಬಹುದಾದ ಚಟುವಟಿಕೆಗಳನ್ನು ನಿರ್ಬಂಧ ಹೇರಲಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ನು ತಪ್ಪದೇ ಸಾರ್ವಜನಿಕರು ಅನುಸರಿಸಿಬೇಕು ಎಂದು ಪಿಎಸ್‍ಐ ಹನುಮಂತ ನರಳೆ ತಿಳಿಸಿದರು.
ಗೋಕಾಕ ತಹಶೀಲ್ದಾರ ನವೀನ ಹುಲ್ಲೂರ ಮತ್ತು ಸಿಪಿಐ ಸತೀಶ ಕಣಿಮೇಶ್ವರ ಮಾತನಾಡಿದರು. ಈ ವರ್ಷದ ಉದ್ದಮ್ಮಾದೇವಿ ಜಾತ್ರಾ ಮಹೋತ್ಸವ ರದ್ದು ಮಾಡುವ ಕುರಿತು ಇಲ್ಲಿಯ ಹಿರಿಯ ನಾಗರಿಕರ, ಸ್ಥಳೀಯರು ಸಂಬಂಧಿಸಿದ ಅಧಿಕಾರಗಳ ಜೊತೆ ಚರ್ಚಿಸಿದರು. ಸ್ಥಳೀಯರಿಗೆ ಸಲಹೆ, ಸೂಚನೆ, ತಿಳುವಳಿಕೆ ನೀಡಿ ಈ ವರ್ಷದ ಜಾತ್ರಾ ಮಹೋತ್ಸವ ಸಂಪೂರ್ಣ ರದ್ದು ಮಾಡುವಂತೆ ಸೂಚಿಸಲಾಯಿತು.
ಗ್ರಾಪಂ ಅಧ್ಯಕ್ಷ ಪಾಂಡು ದೊಡ್ಡಮನಿ, ಮಹಾದೇವ ಗೊಡೇರ, ಮಲಕಾರಿ ವಡೇರ, ಎಂ.ವಿ.ಹಿರೇಮಠ, ವಿ.ಆರ್.ಗಲಬಿ ಸೇರಿದಂತೆ ಸ್ಥಳೀಯ ಹಿರಿಯ ನಾಗರಿಕರು, ಗ್ರಾಪಂ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಇತರರು ಇದ್ದರು.