ಸುಣಧೋಳಿ ಜಡಿಸಿದ್ಧೇಶ್ವರ ಹಾಗು ಯಾದವಾಡ ಗಟ್ಟಿ ಬಸವೇಶ್ವರ ಜಾತ್ರೆ ಹಾಗೂ ರಥೋತ್ಸವ ಸಂಪೂರ್ಣ ರದ್ದು; ಪಿಎಸ್‍ಐ ಎಚ್.ಕೆ.ನರಳೆ
ಬೆಟಗೇರಿ: ಮಹಾಮಾರಿ ಕರೊನಾ 2ನೇ ಅಲೆಯಿಂದ ಕರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಆದೇಶದ ಮಾರ್ಗಸೂಚಿ ನಿಯಮಗಳನುಸಾರ ಕುಲಗೋಡ ಪೊಲೀಸ್ ಠಾಣಾ ವ್ಯಾಪಿಯ ಹಲವಾರು ಹಳ್ಳಿಗಳಲ್ಲಿ ನಡೆಯಬೇಕಿದ್ದ ಪ್ರಸಕ್ತ ವರ್ಷದ ವಿವಿಧ ಜಾತ್ರೆ ಹಾಗೂ ರಥೋತ್ಸವವನ್ನು ಸಂಪೂರ್ಣ ರದ್ದು ಮಾಡಲಾಗಿದೆ ಎಂದು ಕುಲಗೋಡ ಪೊಲೀಸ್ ಠಾಣೆ ಪಿಎಸ್‍ಐ ಹನುಮಂತ ನರಳೆ ಹೇಳಿದರು.
ಕುಲಗೋಡ ಪೊಲೀಸ್ ಠಾಣೆಯ ಸಹಯೋಗದಲ್ಲಿ ಸುಣಧೊಳಿ, ಯಾದವಾಡ, ಮನ್ನಿಕೇರಿ, ಹೊನಕುಪ್ಪಿ ಗ್ರಾಮದಲ್ಲಿ ಗುರುವಾರದಂದು ನಡೆದ ಪ್ರಸಕ್ತ ವರ್ಷದ ವಿವಿಧ ಜಾತ್ರೆ ಮತ್ತು ರಥೋತ್ಸವವನ್ನು ಸಂಪೂರ್ಣ ರದ್ದುಗೊಳಿಸುವಂತೆ ಅಲ್ಲಿಯ ಹಿರಿಯ ನಾಗರಿಕರಿಗೆ, ಸ್ಥಳೀಯರಿಗೆ ತಿಳುವಳಿಕೆ ನೀಡುವ ಸಭೆಯಲ್ಲಿ ಅವರು ಮಾತನಾಡಿ, ಸುಣಧೋಳಿಯಲ್ಲಿ ಏ.27ರಿಂದ ಮೇ.1ರವರೆಗೆ ನಡೆಯಬೇಕಿದ್ದ ಜಡಿಸಿದ್ಧೇಶ್ವರ ಜಾತ್ರೆ, ರಥೋತ್ಸವ, ಯಾದವಾಡದಲ್ಲಿ ಏ.26,27 ರಂದು ಜರುಗಲಿರುವ ಗಟ್ಟಿ ಬಸವೇಶ್ವರ ಜಾತ್ರೆ, ಮನ್ನಿಕೇರಿಯಲ್ಲಿ ಏ.26, 27 ರಂದು ಮಹಾಂತೇಶ್ವರ, ಹೊನಕುಪ್ಪಿಯಲ್ಲಿ ಏ.27 ರಂದು ಬಸವೇಶ್ವರರ ಪ್ರಸಕ್ತ ವರ್ಷದ ಜಾತ್ರೆ ಮತ್ತು ರಥೋತ್ಸವ ಸಂಪೂರ್ಣ ರದ್ದು ಮಾಡಲಾಗಿದ್ದು ಸ್ಥಳೀಯರು, ಭಕ್ತರು ಸಹಕರಿಸಬೇಕು ಎಂದರು.
ಸೂಕ್ತ ಕಾನೂನು ಕ್ರಮ: ಸರ್ಕಾರದ ನಿರ್ದೇಶನದಂತೆ ಧಾರ್ಮಿಕ ಹಬ್ಬ, ಜಾತ್ರಾಮಹೋತ್ಸವ, ಸಮಾರಂಭ, ವಿವಿಧ ಆಚರಣೆಗಳನ್ನು ಹಾಗೂ ಸಾರ್ವಜನಿಕರು ಗುಂಪು ಸೇರಬಹುದಾದ ಚಟುವಟಿಕೆಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ತಪ್ಪದೇ ಸಾರ್ವಜನಿಕರು ಅನುಸರಿಸಿಬೇಕು. ಒಂದು ವೇಳೆ ಸರ್ಕಾರದ ಆದೇಶದಂತೆ ನಿಯಮಗಳನ್ನು ಪಾಲನೆ ಮಾಡದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸ್‍ಐ ಹನುಮಂತ ನರಳೆ ಹೇಳಿದ್ದಾರೆ.
ಕುಲಗೋಡ ಪೊಲೀಸ್ ಠಾಣಾ ವ್ಯಾಪಿಯ ಹಲವಾರು ಹಳ್ಳಿಗಳಲ್ಲಿ ವಿವಿಧ ಜಾತ್ರಾ ಮಹೋತ್ಸವ ರದ್ದು ಮಾಡುವ ಕುರಿತು ಕುಲಗೋಡ ಪೋಲೀಸ್ ಠಾಣಾಧಿಕಾರಿ, ಪೊಲೀಸ್ ಪೇದೆಗಳು ಸ್ಥಳೀಯರಿಗೆ ತಿಳುವಳಿಕೆ ಮೂಡಿಸುವ ಸಭೆ ಆಯೋಜಿಸಿ ಅಲ್ಲಿಯ ಹಿರಿಯ ನಾಗರಿಕರು, ಸ್ಥಳೀಯರ ಜೊತೆ ಚರ್ಚಿಸಿ, ತಮ್ಮ ಊರಿನಲ್ಲಿ ಆಯೋಜಿಸುವ ಈ ವರ್ಷದ ಜಾತ್ರಾ ಮಹೋತ್ಸವ ಸಂಪೂರ್ಣ ರದ್ದು ಮಾಡುವಂತೆ ಈ ವೇಳೆ ಸಲಹೆ, ಸೂಚನೆ, ತಿಳುವಳಿಕೆ ನೀಡಿದರು.
ಮನ್ನಿಕೇರಿ ಗ್ರಾಮದಲ್ಲಿ ಮುದಕಪ್ಪ ಗೋಡಿ, ಅರ್ಜುನ ದಳವಾಯಿ, ಹೊನಕುಪ್ಪಿಯಲ್ಲಿ ಶೇಖರ ಸಿದ್ದಾಪೂರ, ಪ್ರಕಾಶ ಹೆಗಡೆ, ಯಾದವಾಡದಲ್ಲಿ ಕಲ್ಲಪ್ಪ ಗಾಣಗೇರ, ಶಿವಪ್ಪ ನ್ಯಾಮಗೌಡ್ರ, ಸುಣಧೋಳಿಯಲ್ಲಿ ರಾಜು ವಾಲಿ, ಭೀಮಶಿ ಹೂವನ್ನವರ, ವಿ.ಆರ್.ಗಲಬಿ ಸೇರಿದಂತೆ ಆಯಾ ಗ್ರಾಮದ ಸ್ಥಳೀಯ ಹಿರಿಯ ನಾಗರಿಕರು, ಗ್ರಾಪಂ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯರು, ಕುಲಗೋಡ ಠಾಣೆ ಪೊಲೀಸ್ ಪೇದೆಗಳು, ಇತರರು ಇದ್ದರು.