ಕೋಮು ಸೌಹಾರ್ದತೆಗೆ ಮಾದರಿಯಾದ ಮೂಡಲಗಿ
ಹಿಂದು ಶವಗಳಿಗೆ ಮುಸ್ಲಿಂ ಯುವಕರಿಂದ ಶವ ಸಂಸ್ಕಾರ
ಮೂಡಲಗಿ ಪಟ್ಟಣದ ಮಣ್ಣಿನಲ್ಲಿ ಮೊದಲಿನಿಂದಲೂ ವಿಶೇಷತೆ ಪ್ರಾಮುಖ್ಯತೆಗೆ ಹೆಸರುವಾಸಿಯಾಗಿದ್ದು ಅದರಲ್ಲೂ ಸೌಹಾರ್ಧತೆಗೆ ಮಾದರಿ ಪಟ್ಟಣವಾಗಿ ಪ್ರಖ್ಯಾತಿ ಪಡೆದಿದೆ ಎಂದರೆ ತಪ್ಪೇನಿಲ್ಲ.
ದಿನದಿಂದ ದಿನಕ್ಕೆ ಎರಡನೇ ಅಲೆಯ ಕೊರೋನಾ ಪ್ರಕರಣಗಳ ಹೆಚ್ಚಳ ಮತ್ತು ಸಾವುಗಳಿಂದ ಜನತೆ ತಲ್ಲನಗೊಂಡಿರುವ ಇಂತಹ ಸಮಯದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಶವ ಸಂಸ್ಕಾರಕ್ಕೆ ಸ್ವತ:ಕುಟುಂಬಸ್ಥರು,ಸಂಬಂದಿಕರು,ಬಂಧು,ಮಿತ್ರರು ಹಿಂಜರಿಯುತ್ತಿರುವ ಮಾನವೀಯತೆ ಮರೆಯುತ್ತಿರುವ ಇಂತಹ ಸಮಯದಲ್ಲಿ ಮೂಡಲಗಿಯ ಅಂಜುಮನ ಇಸ್ಲಾಂ ಕಮಿಟಿ ಹಾಗೂ ಖಿದಮತ ಸೋಷಿಯಲ್ ವೆಲ್ಫೇರ ಕಮಿಟಿಯ ಮುಸ್ಲಿಂ ಯುವಕರು ಕೊರೋನಾದಿಂದ ಮೃತಪಟ್ಟವರ ಶವ ಸಂಸ್ಕಾರ ಅದೂ ಹಿಂದೂ ವಿಧಿ ವಿಧಾನ ಪ್ರಕಾರ ಶವ ಸಂಸ್ಕಾರ ಮಾಡಿ ಮಾನವೀಯತೆ ಮೆರೆಯುತ್ತಿರುವುದು ಜಿಲ್ಲಾಧ್ಯಂತ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನಾಲ್ಕು ವರ್ಷಗಳಿಂದ ಯಾವುದೆ ಪ್ರಚಾರ ಬಯಸದೆ ಬಡಬಗ್ಗರಿಗೆ ಸಹಾಯ ಮಾಡುತ್ತಿರುವ ಈ ಯುವಕರು ಅನೇಕ ಬಡ ಹೆಣ್ಣು ಮಕ್ಕಳ ಮದುವೆ ಕಾರ್ಯ,ಬಡವರಿಗೆ ವೈದ್ಯಕೀಯ ಚಿಕಿತ್ಸೆ,ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಾಂಗಕ್ಕೆ ನೆರವು,ಉಚಿತ ಕಣ್ಣಿನ ಶಿಬಿರ,ರಕ್ತ ದಾನ ಮಾಡುವುದು ಮಹಾಪೂರದಲ್ಲಿ ಹಾಗೂ ಕೊರೋನಾ ಲಾಕ್ಡೌನ ಸಮಯದಲ್ಲಿ ಸಂಕಷ್ಟದಲ್ಲಿದ್ದವರಿಗೆ ಆಹಾರ,ಧಾನ್ಯ ಕಿಟ್ಟಗಳನ್ನು ತಮ್ಮ ಸ್ವಂತ ಖರ್ಚಿನಿಂದ ವಿತರಣೆ ಮಾಡಿದ್ದಾರೆ. ಈ ತಂಡದಲ್ಲಿ ಶಕೀಲ ಬೇಪಾರಿ, ಮುಬಾರಕ ಪೈಲವಾನ, ಇರ್ಶಾದ ಪೈಲವಾನ, ತೌಶೀಫ್ ಕಿತ್ತೂರ, ಇಲಿಯಾಸ ಪೈಲವಾನ ಇವರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ನೊಂದವರ ದು:ಖದಲ್ಲಿ ತಾವೂ ಬಾಗಿಯಾಗಿ ಕಣ್ಣೀರೊರೆಸುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ಇವರ ಈ ಕಾರ್ಯಕ್ಕೆ ‘ಉತ್ತಮ ಸಮಾಜ ಸೇವಕರು’ ಎಂದು ಪ್ರಶಸ್ತಿ ಕೂಡ ಪಡೆದಿದ್ದಾರೆ. ಕಳೆದ ವರ್ಷದ ಕೊರೋನಾ ಸೋಂಕು ತಗುಲಿ ಮೃತಪಟ್ಟ ಹಲವಾರು ಶವಗಳಿಗೆ ಮುಕ್ತಿಮಾರ್ಗ ತೋರಿಸಿದ್ದಾರೆ. ಸಧ್ಯ ಎರಡು ದಿನಗಳ ಮೊದಲು ಎರಡು ಶವಗಳಗೆ ಶವಸಂಸ್ಕಾರ ಮಾಡಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ ನಾವಿದ್ದೇವೆ ಹೆದರಬೇಡಿ ನಮ್ಮನ್ನು ಸಂಪರ್ಕಿಸಿ ನಿಮ್ಮ ಸೇವೆಗೆ ಸದಾ ಸಿದ್ಧ ಎಂದು ಹೇಳುವ ಇವರು ಸೇವೆಗಗಾಗಿ ಸಿದ್ಧರಿದ್ದಾರೆ.