ಮೇ.6ರಿಂದ ಮೇ.10ರ ತನಕ ಬೆಟಗೇರಿ ಸ್ವಯಂ ಪ್ರೇರಿತ ಸಂಪೂರ್ಣ ಲಾಕ್‍ಡೌನ್
ಬೆಟಗೇರಿ: ಮಹಾಮಾರಿ ಕರೋನಾ 2ನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಮೇ.6ರಿಂದ ಮೇ.10 ರ ತನಕ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸ್ವಯಂ ಪ್ರೇರಿತ ಸಂಪೂರ್ಣ ಲಾಕ್‍ಡೌನ್ ಹಾಕಲಾಗಿದೆ ಎಂದು ಗ್ರಾಪಂ ಪಿಡಿಒ ಎಚ್.ಎನ್.ಬಾವಿಕಟ್ಟಿ ಹೇಳಿದ್ದಾರೆ.
ಬೆಟಗೇರಿ ಗ್ರಾಮದ ಗ್ರಾಮ ಪಂಚಾಯತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಗ್ರಾಪಂ ಕಾರ್ಯಾಲಯದಲ್ಲಿ ಮಂಗಳವಾರ ಮೇ.4ರಂದು ಸ್ವಯಂ ಪ್ರೇರಿತ ಸಂಪೂರ್ಣ ಲಾಕ್‍ಡೌನ್ ಜಾರಿಗೊಳಿಸುವ ಕುರಿತು ಆಯೋಜಿಸಿದ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಆಸ್ಪತ್ರೆ, ಔಷಧ ಮಳಿಗೆಗಳು, ಹಾಲು ಮತ್ತು ದಿನ ಪತ್ರಿಕೆ ಹೊರತುಪಡಿಸಿ, ಹಣ್ಣು, ತರಕಾರಿ ಮಾರಾಟ ಸೇರಿದಂತೆ ಕಿರಾಣಿ ಅಂಗಡಿ-ಮುಂಗಟ್ಟುಗಳನ್ನು ಬಾಗಿಲು ತೆರೆಯದೇ 5 ದಿನಗಳ ಕಾಲ ಸಂಪೂರ್ಣ ಬಂದ ಮಾಡಲಾಗುತ್ತಿದೆ. ಸ್ಥಳೀಯರು ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಲು ಬುಧವಾರ ಮೇ.5 ರಂದು ಪೂರ್ತಿದಿನ ಮುಕ್ತ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಗ್ರಾಮದಲ್ಲಿ ಮೇ.6ರಿಂದ ಮೇ.10ರವರೆಗೆ ದ್ವಿಚಕ್ರ ವಾಹನ ಸವಾರರು, ಸ್ಥಳೀಯರು ಅನವಶ್ಯಕ ತಿರಗಾಡುವದನ್ನು ಸಂಪೂರ್ಣ ನಿಷೇದಿಸಲಾಗಿದೆ. ಸ್ಥಳೀಯರು ಮನೆಗಳಲ್ಲಿಯೇ ಇರಬೇಕು. ಅನವಶ್ಯಕ ಮನೆಯಿಂದ ಹೊರಬಂದವರ ಮೇಲೆ ಕೇಸು ದಾಖಲಿಸಲಾಗುವುದು ಎಂದು ಸ್ಥಳೀಯ ಬೀಟ್ ಪೊಲೀಸ್ ಪೇದೆ ಕಲ್ಮೇಶ ಬಾಗಲಿ ಸೂಚನೆ ನೀಡಿದ್ದಾರೆ.
ಗೋಕಾಕ ತಾಪಂ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಎಸ್.ಎಚ್.ದೇಸಾಯಿ, ಗ್ರಾಪಂ ಟಾಸ್ಕ್ ಪೋರ್ಸ್ ಸಮಿತಿ ಸೆಕ್ಟರ್ ಅಧಿಕಾರಿ ಎ.ಎಮ್.ಮಲಬನ್ನವರ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜೇಶ್ವರಿ ಹಿರೇಮಠ ಅವರು ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅನುಸರಿಸಬಹುದಾದ ಮುನ್ನಚ್ಚರಿಕೆ ಕ್ರಮಗಳ ಕುರಿತು ಮಾತನಾಡಿದರು.
ಗ್ರಾಮದಲ್ಲಿ 5 ದಿನಗಳ ಕಾಲ ಸ್ವಯಂ ಪ್ರೇರಿತ ಸಂಪೂರ್ಣ ಲಾಕ್‍ಡೌನ್ ಜಾರಿಗೊಳಿಸುವ ಕುರಿತು ಸ್ಥಳೀಯ ಹಿರಿಯ ನಾಗರಿಕರು, ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಸದಸ್ಯರು ಸಂಬಂಧಿಸಿದ ಅಧಿಕಾರಿಗಳ ಜೊತೆ ಹಲವು ವಿಷಯಗಳ ಕುರಿತು ಚರ್ಚಿಸಿದರು. ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ, ಕರೊನಾ ಮಟ್ಟಹಾಕುವ ಲಸಿಕೆ ಹಾಕಿಸಿಕೊಳ್ಳುವಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸ್ಥಳೀಯರಿಗೆ ತಿಳುವಳಿಕೆ ಮೂಡಿಸಬೇಕು ಎಂದು ಹಿರಿಯ ನಾಗರಿಕರು ಹೇಳಿದರು.
ಗ್ರಾಮ ಲೆಕ್ಕಾಧಿಕಾರಿ ಜೆ.ಎಂ.ನದಾಫ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಈಶ್ವರ ಬಳಿಗಾರ, ಗ್ರಾಪಂ ಉಪಾಧ್ಯಕ್ಷ ಬಸವಂತ ಕೋಣಿ, ಬಸವರಾಜ ಪಣದಿ, ಸುಭಾಷ ಜಂಬಗಿ, ಬಸವರಾಜ ದೇಯಣ್ಣವರ, ಗೌಡಪ್ಪ ಮಾಳೇದ, ಸುರೇಶ ಬಾಣಸಿ, ಗ್ರಾಪಂ ಸದಸ್ಯರು, ಹಿರಿಯ ನಾಗರಿಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು, ಪಿಎಚ್‍ಸಿ ಹಾಗೂ ಗ್ರಾಪಂ ಸಿಬ್ಬಂದಿ, ಇತರರು ಇದ್ದರು.