ಮೂಡಲಗಿ: ಮಹಾಮಾರಿ ಕೊರೋನಾ 2ನೇ ಅಲೆಯಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಚಿಕಿತ್ಸೆಗೆ ಆಮ್ಲಜನಕದ ಕೊರತೆ ನೀಗಿಸಲು ಅವಶ್ಯಕತೆಗನುಗುಣವಾಗಿ ಕೇಂದ್ರ ಸ್ವಾಮ್ಯದ ಸಾರ್ವಜನಿಕ ಉದ್ಯಮಗಳಿಂದ ಈಗ ರಾಜ್ಯದ 28 ವಿವಿಧ ಆಸ್ಪತ್ರೆಗಳಲ್ಲಿ ಆಮ್ಲಜನಕದ ಉತ್ಪಾದನಾ ಘಟಕಗಳ ಸ್ಥಾಪನೆಗೆ ಕೇಂದ್ರ ಇಂಧನ ಇಲಾಖೆ ಅನುಮೊದನೆ ನೀಡಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಬುಧವಾರ ಮೇ.12 ರಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು, ಮೂಡಲಗಿ ನಗರದ ಸಮುದಾಯ ಆರೋಗ್ಯ ಕೇಂದ್ರ, ಕೋವಿಡ-19 ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದರು.
ರಾಜ್ಯದಲ್ಲಿ ಆಮ್ಲಜನಕದ ಕೊರತೆ ನೀಗಿಸುವ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯ ಗೋಕಾಕ, ಚಿಕ್ಕೋಡಿ ನಗರಗಳಿಗೆ ಆದ್ಯತೆ ನೀಡಿವುದು ಖುಷಿ ಸಂಗತಿಯಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ನಾವೆಲ್ಲರೂ ಈ ವೇಳೆ ಅಭಿನಂದಿಸಬೇಕಾಗುತ್ತದೆ. ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ಅವರು ಕೇಂದ್ರ ಸರ್ಕಾರದ ಸ್ವಾಮ್ಯದ ಎಂಆರ್‍ಪಿಎಲ್, ಓಎನ್‍ಜಿಸಿ ಹಾಗೂ ಎಮ್‍ಡಿಸಿ ಕಂಪನಿಗಳಿಗೆ ತಕ್ಷಣ ಆದೇಶಿಸಿ, ಕರ್ನಾಟಕ ರಾಜ್ಯದಲ್ಲಿ 32 ಆಕ್ಸಿಜನ್ ಉತ್ಪಾದಕ ಘಟಕಗಳನ್ನು ಸ್ಥಾಪಿಸಲು ಆದೇಶವಿತ್ತಿದ್ದಾರೆ ಎಂದರು.
ಕಾಂಗ್ರೇಸ್ ಶಾಸಕರು ವಿರೋಧ ಪಕ್ಷದಲ್ಲಿದ್ದರೂ ಕೂಡಾ ಆಡಳಿತಾರೂಢ ಸರ್ಕಾರದ ಒಂದು ಭಾಗವಿದ್ದಂತೆ, ಕರೊನಾ ಮಹಾಮಾರಿ ತಡೆಗಟ್ಟುವ ನಿಟ್ಟಿನಲ್ಲಿ ಅವಶ್ಯಕ ಪರಿಕರ ಹಾಗೂ ಜೌಷಧೂಪಚಾರ ಸೇರಿದಂತೆ ಹತ್ತು ಹಲವು ಸೌಲಭ್ಯಗಳನ್ನು ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಸಮರೋಪಾದಿಯಲ್ಲಿ ಕ್ರಮಕೈಗೊಳ್ಳತ್ತಿದ್ದು, ಬೆಳಗಾವಿ ಜಿಲ್ಲೆಯ ಕಾಂಗ್ರೇಸ್ ಪಕ್ಷದ ಕೆಲ ಶಾಸಕರು ರಾಜ್ಯ ಸರ್ಕಾರದ ಕುರಿತು ಇಲ್ಲ ಸಲ್ಲದ ಮಾತುಗಳನ್ನಡುತ್ತಿದ್ದು, ಇಂತಹ ಸಂದರ್ಭದಲ್ಲಿ ನಾಡಿನ ಜನತೆಗೆ ತಪ್ಪು ಮಾಹಿತಿ ನೀಡಿ, ರಾಜಕೀಯ ಬೆಳೆ ಬೆಯಿಸಿಕೊಳ್ಳುವ ಕೆಲಸ ಮಾಡಬಾರದು, ಕರೊನಾ ಪೀಡಿತ ರೋಗಿಗಳಿಗೆ ಮತ್ತು ಅವರ ಕುಟುಂಬದವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಹೊರತು, ಭಯಬೀತರಾಗುವಂತೆ ಹೇಳಿಕೆಗಳನ್ನು ನೀಡಬಾರದು, ಜನರ ಪ್ರಾಣ ಕಾಪಾಡುವ ಸೂಕ್ತ ಮಾರ್ಗದರ್ಶನದ ಮಾತುಗಳನ್ನಾಡಬೇಕು ಎಂದು ಕಡಾಡಿ ಹೇಳಿದರು.
ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ, ಬಿಇಓ ಅಜೀತ ಮನ್ನಿಕೇರಿ, ಸಿಪಿಐ ವೆಂಕಟೇಶ ಮುರನಾಳ, ಉಪ ತಹಶೀಲ್ದಾರ ಶಿವಾನಂದ ಬಬಲಿ, ವೈಧ್ಯಾಧಿಕಾರಿ ಡಾ. ಭಾರತಿ ಕೋಣಿ, ಮಹಾದೇವ ಶೆಕ್ಕಿ, ಹಣಮಂತ ತೇರದಾಳ, ಮತ್ತಿತರರು ಇದ್ದರು.