ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ
ರೈತರಿಗೆ ಆರ್ಥಿಕ ನೆರವು-ಸಂಸದ ಈರಣ್ಣ ಕಡಾಡಿ ಹರ್ಷ
ಮೂಡಲಗಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 8ನೇ ಕಂತಿನ ಹಣಕಾಸು ನೆರವು ವರ್ಗಾವಣೆ ಕರ್ನಾಟಕ ರಾಜ್ಯಕ್ಕೆ 53 ಲಕ್ಷ 35 ಸಾವಿರ ರೈತರಿಗೆ ರೂ. 1067 ಕೋಟಿ ಹಣವನ್ನು ರೈತರ ಖಾತೆಗಳಿಗೆ ಜಮೆ ಆಗಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದರು.
ಶುಕ್ರವಾರ ಮೇ-14 ರಂದು ಕಲ್ಲೋಳಿ ಪಟ್ಟಣದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಡಿಬಿಟಿ ಮೂಲಕ ರೈತರ ಖಾತೆಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 9.5 ಕೋಟಿ ರೈತರ ಖಾತೆಗಳಿಗೆ 19 ಸಾವಿರ ಕೋಟಿ ರೂ. 8 ನೇ ಕಂತಿನ ಹಣಕಾಸು ನೆರವು ವರ್ಗಾವಣೆ ಮತ್ತು ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಈರಣ್ಣ ಕಡಾಡಿ ಅವರು ಮಾತನಾಡಿದರು.
ಕರೋನಾ ಕಾಲಘಟ್ಟದಲ್ಲಿ ಕೃಷಿ ಚಟುವಟಿಕೆಗಳು ಕಾರ್ಯನಿರ್ವಹಿಸುತ್ತಿದ್ದು ಉತ್ಪಾಧನೆಯಲ್ಲಿ ಶೇ 10ರಷ್ಟು ಹೆಚ್ಚಾಗಿದ್ದು, ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ರೈತರು ತೊಂದರೆ ಅನುಭವಿಸುತ್ತಿ ರುವುದು ನಮ್ಮ ಗಮನಕ್ಕೆ ಬಂದಿದ್ದು ಮುಂಬರುವ ದಿನಗಳಲ್ಲಿ ಅನುಕೂಲ ಮಾಡಿಕೊಡಲಾಗುವುದು ಎಂದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಆರ್ಥಿಕ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ನಾವೆಲ್ಲರೂ ಈ ವೇಳೆ ಅಭಿನಂದಿಸಬೇಕಾಗುತ್ತದೆ ಎಂದರು.