ಗೋಕಾಕ: ಈಗಿರುವ ತಾಲೂಕಾ ಆಸ್ಪತ್ರೆಯನ್ನು 100 ಬೆಡ್‍ಗಳ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸುವ ಮೂಲಕ ಬಡ ರೋಗಿಗಳಿಗೆ ಕರೋನಾ ಮಹಾಮಾರಿಯಿಂದ ಕಾಪಾಡಲು ಅನುಕೂಲ ಮಾಡಿಕೊಡಬೇಕು, ಮಹಿಳಾ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಯಲ್ಲಿ ಹೊರ ರೋಗಿ ವಿಭಾಗವನ್ನು ಪ್ರಾರಂಭಿಸಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಶನಿವಾರ ಮೇ 15 ರಂದು ನಗರದ ಪ್ರವಾಸಿ ಮಂದಿರದಲ್ಲಿ ಕರೋನಾ 2ನೇ ಅಲೆ ನಿಯಂತ್ರಣ ಕುರಿತು ಗೋಕಾಕ ತಾಲೂಕಾ ಟಾಕ್ಸ್‍ಪೋರ್ಸ ಸಮಿತಿ ಸಭೆಯಲ್ಲಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರ ಮಂಜೂರು ಮಾಡಿದ ಗೋಕಾಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಿ ಆಕ್ಸಿಜನ್ ಕೊರತೆಯಾಗದಂತೆ ಕ್ರಮಕೈಗೊಳ್ಳುವಂತೆ ತಿಳಿಸಿದರು.
ಕರೋನಾ 2ನೇ ಅಲೆ ತಡೆಗಟ್ಟುವಲ್ಲಿ ಕೊರತೆಯಾಗಿರುವ ಅಗತ್ಯ ಸಿಬ್ಬಂದಿಯನ್ನು ಆದಷ್ಟು ಬೇಗ ನೇಮಕ ಮಾಡಿಕೊಳ್ಳಲು ಕ್ರಮಕೈಗೊಳ್ಳಬೇಕು, ರ್ಯಾಪಿಡ್ ಟೆಸ್ಟ್‍ಗಳನ್ನು ಹೆಚ್ಚಿಸಿ, ಫಲಿತಾಂಶ ಬೇಗ ಕೈ ಸೇರಿದರೆ ಅಗತ್ಯ ಚಿಕಿತ್ಸೆಗೆ ಅನುಕೂಲವಾಗುತ್ತದೆ ಎಂದರು.
ಗ್ರಾಮಾಂತರ ಪ್ರದೇಶದಲ್ಲಿ ಕರೋನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದ್ದು ಆಶಾ, ಅಂಗನವಾಡಿ ಕಾರ್ಯಕರ್ತರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮುತುವರ್ಜಿವಹಿಸಿ ಸಮುದಾಯಕ್ಕೆ ರೋಗ ಹರಡದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಹೇಳಿದರು.
ಜಿಲ್ಲೆಯಲ್ಲಿ ಅತಿ ಹೆಚ್ಚು ಸಕಾರಾತ್ಮಕ ಪ್ರಕರಣಗಳು ಸರ್ಕಾರ ವರದಿ ಪ್ರಕಾರ ಶೇ 33 ರಷ್ಟಿದ್ದು, ಸ್ಯಾನಿಂಗ ಸೆಂಟರ್ ಗಳಲ್ಲಿ ಪರಿಕ್ಷಿಸಲಾಗುತ್ತಿದೆ. ಸರ್ಕಾರದ ದಾಖಲೆಗಳನ್ನು ಮೀರಿ ಅಂದಾಜು ಶೇ 40 ರಷ್ಟು ಪ್ರಕರಣಗಳು ಇರಬಹುದಾದ ಸಾಧ್ಯತೆ ಇದೆ. ಇದು ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣ ಹೊಂದಿದ ತಾಲೂಕಾಗಿದ್ದು, ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಯುದ್ದೋಪಾದಿಯಲ್ಲಿ ಅಧಿಕಾರಿಗಳು ಕೆಲಸ ನಿರ್ವಹಿಸಬೇಕೆಂದು ವಿನಂತಿಸಿದರು.
ರೆಮಿಡಿಸಿವಿರ್, ಆಮ್ಲಜನಕ ಸರಬರಾಜು ಸೇರಿದಂತೆ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಕಾರ್ಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಸಕ್ರಿಯ ಕೋವಿಡ್ ಪ್ರಕರಣದ ಆಧಾರದಲ್ಲಿ ರಾಜ್ಯಗಳಿಗೆ ಔಷಧಿ ಮತ್ತು ಆಮ್ಲಜನಕ ಸರಬರಾಜು ಮಾಡುತ್ತಿದೆ ಎಂದರು. ಗೋಕಾಕ ತಾಲೂಕಿನಲ್ಲಿ ರೆಮಿಡಿಸಿವಿರ್, ಆಮ್ಲಜನಕ ಕೊರತೆಯಾಗದಂತೆ ಮುನ್ನಚ್ಚರಿಕೆ ವಹಿಸುವಂತೆ ಆಗ್ರಹಿಸಿದರು.
ರಾಜ್ಯಸಭಾ ಸದಸ್ಯರು, ಸಂಸದರು, ಜಿಲ್ಲಾಧಿಕಾರಿಗಳು ತಾಲೂಕಾ ಆಸ್ಪತ್ರೆ, ತಹಶೀಲ್ದಾರ ಕಛೇರಿಯ ವಾರ ರೂಮ, ಸಹಾಯವಾಣಿ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ಸಲಹೆ ಸೂಚನೆ ನೀಡಿದರು. ತಾಲೂಕಾ ಆಸ್ಪತ್ರೆಯಲ್ಲಿನ ಆಕ್ಸಿಜನ ಘಟಕದ ಕಾಮಗಾರಿಯನ್ನು ವೀಕ್ಷಿಸಿದರು.
ಬೆಳಗಾವಿ ಲೋಕಸಭಾ ಸದಸ್ಯರಾದ ಶ್ರೀಮತಿ ಮಂಗಳಾ ಅಂಗಡಿ, ಜಿಲ್ಲಾಧಿಕಾರಿ ಬಸವರಾಜ ಹಿರೇಮಠ, ತಹಶೀಲ್ದಾರ್ ಪ್ರಕಾಶ್ ಹೋಳೆಪ್ಪಗೋಳ, ಡಿ.ವಾಯ.ಎಸ್.ಪಿ ಜಾವೇದ ಇನಾಂದಾರ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಿ. ಕೆ ಲಾಳಿ, ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ತಾಲೂಕಾ ಆರೋಗ್ಯಾಧಿಕಾರಿ ಡಾ. ಮುತ್ತಣ್ಣ ಕೊಪ್ಪದ, ಮುಖ್ಯ ವೈದ್ಯಾಧಿಕಾರಿ ಡಾ. ರವೀಂದ್ರ ಅಂಟಿನ, ಡಾ. ಮಹೇಶ ಕೋಣಿ ಸೇರಿದಂತೆ ತಾಲೂಕಾ ಅಧಿಕಾರಿಗಳು ಉಪಸ್ಥಿತರಿದ್ದರು.