ಮೂಡಲಗಿ: ತಾಲೂಕಿನ ಯಾದವಡ ಗ್ರಾಮದಲ್ಲಿ ಕೊರೋನಾ ನಿಯಂತ್ರಣ ತೆಡೆಗಟ್ಟಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆ ಮೇರಿಗೆ ಯಾದವಾಡ ಗ್ರಾಮದಲ್ಲಿ ಸೋಮವಾರದಂದು ಜಾಗೃತಿ ಮೂಡಿಸುವ ಸಭೆ ಜರುಗಿತು.
ಮೂಡಲಗಿ ತಹಶೀಲ್ದಾರ ಡಾ. ಮೋಹನಕುಮಾರ ಭಸ್ಮೆ ಮಾತನಾಡಿ, ದಿನೇ ದಿನೇ ಕೊರೋನಾ ಸೋಂಕು ಹೆಚ್ಚುತ್ತಿದೆ, ಈಗಾಗಲೇ ಇದರ ಮಟ್ಟ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿಲಾಗಿದೆ. ಕೊರೋನಾ ಬಗ್ಗೆ ಸಾರ್ವಜನಿಕರು ಜಾಗೃತಿಯಿಂದ ಇರಬೇಕು. ಆದರೆ ಇದರಿಂದ ಯಾರೂ ಗಾಬರಿಯಾಗಬಾರದು ಎಂದು ಹೇಳಿದರು.
ಸೋಂಕಿತರಿಗೆ ಈಗಾಗಲೇ ಅಗತ್ಯ ಇರುವ ಚಿಕಿತ್ಸೆ ನೀಡಲಾಗುತ್ತಿದೆ. ಶೇ.90ರಷ್ಟು ಆಕ್ಸಿಜನ್ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಬಳಸಿಕೊಳ್ಳಲಾಗುತ್ತಿದೆ. ಗಂಭೀರ ಕಾಯಿಲೆಯುಳ್ಳ ಸೋಂಕಿತರನ್ನು ಗೋಕಾಕ ಸಾರ್ವಜನಿಕ ಆಸ್ಪತ್ರೆ, ಮಲ್ಲಾಪೂರ ಪಿ.ಜಿ, ಎಂ.ಡಿ.ಆರ್.ಎಸ್ ಶಾಲೆ ಹಾಗೂ ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಸೋಂಕಿತರಿಗೆ ಅಗತ್ಯ ಔಷಧೋಪಚಾರ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಕಡಿಮೆ ಬಿದ್ದ ಪಕ್ಷದಲ್ಲಿ ಸೋಂಕಿತರ ಆರೈಕೆಗಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಎಲ್ಲ ರೀತಿಯ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ನೀಡಿದ್ದಾರೆ ಎಂದು ತಹಶೀಲ್ದಾರ ಭಸ್ಮೆ ಹೇಳಿದರು.
ಹಿರಿಯ ತಜ್ಞ ವೈದ್ಯ ಡಾ. ಆರ್. ಎಸ್. ಬೆಣಚಿನಮರಡಿ ಮಾತನಾಡಿ, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕವನ್ನು ಹೊಂದಿರುವ ಸೋಂಕಿತರು ಕಡ್ಡಾಯವಾಗಿ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬೇಕು. ಅಲ್ಲದೇ ಗುಣ ಲಕ್ಷಣಗಳು ಕಂಡು ಬಂದರೆ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಮುತ್ತಣ್ಣ ಕೊಪ್ಪದ, ವಲಯ ಶಿಕ್ಷಣಾಧಿಕಾರಿ ಎ.ಸಿ.ಮನ್ನಿಕೇರಿ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಸಿಡಿಪಿಓ ಗುಜನಟ್ಟಿ, ತಾಪಂ ಎಡಿ ಸಂಗಮೇಶ ರೊಡ್ಡನ್ನವರ, ಸಿಪಿಐ ವೆಂಕಟೇಶ ಮುರನಾಳ, ಕಾಮನಕಟ್ಟಿ ಗ್ರಾಪಂ ಅಧ್ಯಕ್ಷ ಸದಾ ದುರಗನ್ನವರ, ರಾಜುಗೌಡ ಪಾಟೀಲ, ಮಲ್ಲಪ್ಪ ಚೆಕ್ಕನ್ನವರ, ಬಸವರಾಜ ಭೂತಾಳಿ, ಬಸವರಾಜ ಹಿಡಕಲ್ಲ, ಡಾ. ಕವಟಕೊಪ್ಪ, ಮಲ್ಲಪ್ಪ ಮಾಳೇದ, ಕಲ್ಲಪ್ಪ ಗಾಣಗಿ, ಡಾ. ಶಿವನಗೌಡ ಪಾಟೀಲ, ಕುಬೇರ ದಾಸರ, ಯಾದವಾಡ, ಕಾಮನಕಟ್ಟಿ ಗ್ರಾಪಂ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.