ಉತ್ತಮ ಆರೋಗ್ಯದ ಕಾಳಜಿ ಅವಶ್ಯಕ: ಕುಲಸಚಿವ ಡಾ. ಬಸವರಾಜ ಪದ್ಮಶಾಲಿ
ಕಲ್ಲೋಳಿ: ನಮ್ಮ ನಿತ್ಯ ಜೀವನದಲ್ಲಿ ಶಿಸ್ತಿನ ಯೋಗ, ಧ್ಯಾನ, ವ್ಯಾಯಾಮ ಮಾಡಬೇಕು. ಉತ್ತಮ ಆಹಾರ, ನೀರು ಹಾಗೂ ಗಾಳಿಯನ್ನು ಸೇವಿಸುವುದರ ಮೂಲಕ ಕೊರೋನಾದಂತಹ ಸಾಂಕ್ರಾಮಿಕ ರೋಗಗಳು ನಮ್ಮ ದೇಹವನ್ನು ಬಾಧಿಸದಂತೆ ಎಚ್ಚರ ವಹಿಸಬೇಕು ಎಂದು ರಾಣಿ ಚನ್ನಮ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಬಸವರಾಜ ಪದ್ಮಶಾಲಿ ನುಡಿದರು.
ಅವರು ಗುರುವಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ಹಾಗೂ ಕಲ್ಲೋಳಿಯ ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೋವಿಡ್-೧೯ ವೈರಸ್ ಕುರಿತು ಜಾಗೃತಿ ಹಾಗೂ ಲಸಿಕಾ ಅಭಿಯಾನ ಎಂಬ ವರ್ಚುವಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೊರೋನಾ ರೋಗದ ಕುರಿತು ಹೇದರದೆ ಜಾಗೃತಿ ವಹಿಸಬೇಕು. ರೋಗದ ಲಕ್ಷಣಗಳು ಕಂಡು ಬಂದಾಗ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕು ಎಂದರು.
ಡಾ. ಆನಂದ ಹೊಸೂರ, ಭರತೇಶ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಹಾಗು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಮುಖ್ಯ ಅತಿಥಿಯಾಗಿ ಮಾತನಾಡಿ, ಕೊರೋನಾ ವೈರಸ್ ಎರಡನೇಯ ಅಲೆ ನಗರ ಹಾಗೂ ಗ್ರಾಮೀಣ ಪರಿಸರದಲ್ಲಿ ವ್ಯಾಪಕವಾಗಿ ಹರಡುತ್ತಿರುವುದು ಶೋಚನೀಯ. ಇದಕ್ಕೆಲ್ಲ ನಾವು ಸರಿಯಾದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೇ ಇರುವುದು ಕಾರಣವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಮೇಲಿಂದಮೇಲೆ ಕೈಗಳನ್ನು ಸುಚಿಗೊಳಿಸುವುದು ಅವಶ್ಯಕವಾಗಿದೆ. ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು ಎಂದು ಹೇಳಿದರು.
ಸಂಸ್ಥೆಯ ಚೇರಮನ್ನರಾದ ಶ್ರೀ ಬಸಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊರೋನಾ ವೈರಸ್ ವಿರುದ್ಧ ಹೋರಾಡಲು ಎಲ್ಲರೂ ಧೈರ್ಯದಿಂದ ಸಜ್ಜಾಗಬೇಕು. ನಮ್ಮ ಆರೋಗ್ಯದ ಕಾಳಜಿಯನ್ನು ನಾವೇ ವಹಿಸಿಕೊಳ್ಳಬೇಕು ಎಂದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಸಂಯೋಜಕರಾದ ಡಾ. ಬಿ.ಎಸ್. ನಾವಿ ಮಾತನಾಡಿ, ವಿಶ್ವವಿದ್ಯಾಲಯವು ೩೧೬ ಎನ್.ಎಸ್.ಎಸ್. ಘಟಕ ಮತ್ತು ಕಾರ್ಯಕ್ರಮಾಧಿಕಾರಿಗಳನ್ನು ಹಾಗೂ ೨೫೦೦೦ ಸ್ವಯಂಸೇವಕರನ್ನು ಹೊಂದಿದ ದೊಡ್ಡ ಕುಟುಂಬವಾಗಿದೆ. ಪ್ರತಿಯೊಂದು ಘಟಕಗಳು ಸಮಾಜದೊಂದಿಗೆ ಬೇರೆತು ಕೋವಿಡ್-೧೯ ವೈರಸ್ ವಿರುದ್ಧ ಹೋರಾಡುತ್ತಿದ್ದಾರೆ. ರಕ್ತದಾನಿಗಳಾಗಿ, ವಾರಿಯರ್ಸ್ ಗಳಾಗಿ, ಕೇರ್ ಸೆಂಟರಗಳಲ್ಲಿ ಪಾಲ್ಗೊಂಡಿದ್ದಾರೆ. ಮಾಸ್ಕ ಹಂಚಿಕೆ, ಆಹಾರ ಧಾನ್ಯ ಹಂಚಿಕೆ ಮುಂತಾದ ಕಾರ್ಯದಲ್ಲಿ ತೊಡಗಿರುವ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ವಿವಿಧ ಕಾಲೇಜುಗಳ ಕಾರ್ಯಕ್ರಮಾಧಿಕಾರಿಗಳು, ಅಧ್ಯಾಪಕರು, ಸ್ವಯಂ ಸೇವಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮೈಸೂರಿನ ಅಮ್ಮ ರಾಮಚಂದ್ರ ಎನ್.ಎಸ್.ಎಸ್ ಗೀತೆಯನ್ನು ಪ್ರಸ್ತುತ ಪಡಿಸಿದರು. ಕುಮಾರಿ ಸರಸ್ವತಿ ಆಲಖನೂರೆ ಹಾಗೂ ಸಂಗಡಿಗರು ಜಾಗೃತಿ ಗೀತೆ ಹಾಡಿದರು. ಕಾಲೇಜಿನ ಉಪ-ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಸ್ವಾಗತಿಸಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾ.ಸೇ.ಯೋ. ಕೋಶದ ಸಲಹಾ ಸಮಿತಿ ಸದಸ್ಯರು ಹಾಗೂ ಕಾರ್ಯಕ್ರಮಾಧಿಕಾರಿಗಳಾದ ಪ್ರೊ. ಶಂಕರ ನಿಂಗನೂರ ನಿರೂಪಿಸಿ, ವಂದಿಸಿದರು.