ಜಿಲ್ಲಾಧಿಕಾರಿಗಳೇ ಮೂಡಲಗಿಯತ್ತ ಗಮನ ಹರಿಸಿ..!
ಗ್ರಾಪಂಗಳ ವ್ಯಾಪ್ತಿ 506 ಸಾವು | ಕೋವಿಡ್‌ದಿಂದ 123 ಸಾವು | 383 ಜನರ ಸಾವಿಗೆ ಕಾರಣವೇನು ? | ಪುರಸಭೆ, ಪ.ಪಂಚಾಯತ ವ್ಯಾಪ್ತಿ ಮಾಹಿತಿ ಕಲೆ ತಂಡ ರಚನೆ
ಮೂಡಲಗಿ: ತಾಲೂಕಿನಾದ್ಯಂತ ಕೊರೋನಾ ಎರಡನೇ ಅಲೆಯ ಸೋಂಕಿಗೆ ಬಲಿಯಾದವರ ಮತ್ತು ಸಹಜ ಸ್ಥಿತಿಯಲ್ಲಿ ಬಲಿಯಾದವರ ಸಂಖ್ಯೆ ಎಷ್ಟು ಎಂಬ ಮಾಹಿತಿ ಹಾಗೂ ಸೋಂಕಿತರು ಎಷ್ಟು ಇದ್ದಾರೆ ಎಂಬುದು ಸರ್ಕಾರಕ್ಕೆ ಅಧಿಕೃತವಾಗಿ ಮಾಹಿತಿ ಇಲ್ಲವಾದರೇ ಈ ಕೊರೋನಾ 2ನೇ ಮತ್ತು 3ನೇ ಅಲೆಯಿಂದ ಜನರನ್ನು ರಕ್ಷಿಸಿಕೊಳ್ಳುವುದು ಸರ್ಕಾರಕ್ಕೆ ಅಸಾಧ್ಯವಾದ ಕೆಲಸವಾಗಿದೆ.
ತಾಲೂಕಿನ ವ್ಯಾಪ್ತಿಯಲ್ಲಿ ಒಂದು ಪುರಸಭೆ, ಎರಡು ಪಟ್ಟಣ ಪಂಚಾಯಿತಗಳು, 20 ಗ್ರಾಪಂಗಳು ಬರುತ್ತವೆ. ಶನಿವಾರದಂದು ವರದಿಗಾರರ ತಾಲೂಕಿನ ಎಲ್ಲ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ, ಹಾಗೂ ಪುರಸಭೆ ಅಧಿಕಾರಿಗಳ, ಪಟ್ಟಣ ಪಂಚಾಯತ ಅಧಿಕಾರಿಗಳ ಜೊತೆ ಮಾತನಾಡಿ ಅಲ್ಲಿಯ ಪರಸ್ಥಿತಿ ಬಗ್ಗೆ ಮತ್ತು ಬಲಿಯಾದವರ ಬಗ್ಗೆ ಮಾಹಿತಿ ಕಲೆ ಹಾಕಲಾಯಿತು, ಆ ಸಾವಿನ ಸಂಖ್ಯೆಗಳನ್ನು ನೋಡಿದರೇ ಸಾಕು ಒಂದು ಕ್ಷಣ ಆಶ್ಚರ್ಯವಾಗುತ್ತದೆ.
ಹೌದು ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದು, ಎಸ್‌ಆರ್‌ಎಚ್-ಐಡಿ ಇದ್ದರೆ ಮಾತ್ರ ಸೋಂಕಿತರ ಸಂಖ್ಯೆ ಎಷ್ಟು, ಅವರ ಆರೋಗ್ಯದ ಬಗ್ಗೆ, ಸಾವನ್ನಪ್ಪಿದವರ ಮಾಹಿತಿ ಮಾತ್ರ ಸಿಗುತ್ತದೆ. ಇಲ್ಲಿಯವರೆಗೂ ಸ್ಥಳೀಯ ಅಧಿಕಾರಿಗಳು ಹೇಳುವ ಮಾಹಿತಿ ಪ್ರಕಾರ ಕೋವಿಡ್‌ದಿಂದ ಬಲಿಯಾದವರ ಸಂಖ್ಯೆ 123 ಮಾತ್ರ ಆದರೆ ತಾಲೂಕಿನ ವ್ಯಾಪ್ತಿ ಒಟ್ಟು 506 ಸಾವುಗಳು ಆಗಿವೆ. ಇನ್ನೂಳಿದ 383 ಜನ ಸಾವಿಗೆ ಕಾರಣವೇನು ಎಂದು ಅಧಿಕಾರಿಗಳನ್ನ ಕೇಳಿದರೇ ವಯೋವೃದ್ಧರಾಗಿ ಹಾಗೂ ಹೃದಯಘಾತ, ಬೇರೆ ಬೇರೆ ಕಾರಣಕ್ಕಾಗಿ ಸಾವನ್ನಪ್ಪಿದ್ದಾರೆ ಎಂಬ ಉತ್ತರ ನೀಡುತ್ತಾರೆ. ಆದರೆ ಇನ್ನೂ ಮೂಡಲಗಿ ಪುರಸಭೆ, ಕಲ್ಲೋಳಿ ಪಟ್ಟಣ ಪಂಚಾಯತ ವ್ಯಾಪ್ತಿಯ ಸಾವನ್ನಪ್ಪಿದವರ ಮಾಹಿತಿ ಸರಿಯಾಗಿ ಸಿಗುತ್ತಿಲ್ಲ. ಆ ವ್ಯಾಪ್ತಿಗಳು ಸಾವುಗಳು ಎಷ್ಟು ಕೋವಿಡ್‌ದಿಂದ ಸಾವುಗಳು ಎಷ್ಟು ಎಂಬ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.
ತಾಲೂಕಿನ ವ್ಯಾಪ್ತಿಯಲ್ಲಿ ಪ್ರತಿದಿನ ಸಾವುಗಳು ಸಂಭವಿಸುತ್ತಿವೆ, ಆದರೆ ಯಾವ ಕಾರಣಕ್ಕೆ ಪ್ರತಿದಿನ ಸಾವನ್ನಪ್ಪುತ್ತಿದ್ದಾರೆ ಎಂಬ ಮಾಹಿತಿಯೂ ಆರೋಗ್ಯ ಇಲಾಖೆಯಲ್ಲಿಯೂ ಸಿಗುತ್ತಿಲ್ಲ. ಹಾಗಾದರೇ ತಾಲೂಕಿನಲ್ಲಿ ಪ್ರತಿನಿತ್ಯ ಸಾವನ್ನಪ್ಪುತ್ತಿರುವುದಕ್ಕೆ ಕಾರಣ ಕೋವಿಡದಿಂದನಾ ಅಥವಾ ಬೇರೆ ರೋಗನಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಇದಕ್ಕೆ ಜಿಲ್ಲಾ ಮತ್ತು ತಾಲೂಕಾಡಳಿತವೇ ಸ್ಪಷ್ಟ ಉತ್ತರ ನೀಡಬೇಕು.
ತಾಲೂಕಿನ ಜನತೆ ಎಚ್ಚೆತ್ತುಕೊಳ್ಳಿ : ಜನತೆಯೂ ಎರಡನೇ ಮತ್ತು ಮೂರನೇ ಅಲೆಯ ಕೋವಿಡದಿಂದ ಪಾರಾಗಲು ಸರ್ಕಾರದ ನಿಯಮಗಳನ್ನು ಪಾಲಿಸಿ, ಮನೆಯಲ್ಲಿ ಇದ್ದರೆ ಮಾತ್ರ ಒಳ್ಳೆಯದು ಇಲ್ಲವಾದರೆ ಆಪತ್ತು ಕಟ್ಟಿಟ ಬುತ್ತಿ. ಕೊರೋನಾ ಲಕ್ಷಣಗಳು ಕಂಡು ಬಂದ ಕೂಡಲೇ ಸಮೀಪದ ಆಸ್ಪತ್ರೆಗಳಿಗೆ ಭೇಟಿ ನೀಡಿ, ವೈದ್ಯರ ಸಲಹೆ ಪಡೆದು ತಮ್ಮ ಮನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಯುವುದು ಒಳ್ಳೆಯದು.