ಬಸವರಾಜ ಕಟ್ಟಿಮನಿ ಸಮಾಜ ತಿದ್ದುವ ಸಾಹಿತ್ಯ ರಚಿಸಿದ್ದರು
ಮೂಡಲಗಿ: ‘ಬಸವರಾಜ ಕಟ್ಟಿಮನಿ ಅವರು ಸಮಾಜದಲ್ಲಿಯ ಶೋಷಣೆಯ ವಿರುದ್ಧ ಧ್ವನಿ ಎತ್ತಿದರಲ್ಲದೆ, ತಮ್ಮ ಕಥೆ, ಕಾದಂಬರಿಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಿದರು’ ಎಂದು ಮುನ್ಯಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೈ.ವಿ. ಮಳಲಿ ಹೇಳಿದರು.
ಇಲ್ಲಿಯ ಹರ್ಷಾ ಸಾಂಸ್ಕøತಿಕ ಭವನದಲ್ಲಿ ಮೂಡಲಗಿ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜ್ಞಾನದೀಪ್ತಿ ಪ್ರತಿಷ್ಠಾನಗಳ ಆಶ್ರಯದಲ್ಲಿ ಜರುಗಿದ ಬೆಳದಿಂಗಳ 18ನೇ ಚಿಂತನ ಮಂಥನ ಕಾರ್ಯಕ್ರಮ ಅಡಿಯಲ್ಲಿ ಏರ್ಪಡಿಸಿದ್ದ ಬಸವರಾಜ ಕಟ್ಟಿಮನಿ ಅವರ ಬದುಕು, ಬರಹ ಕುರಿತು ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದ ಅವರು ಕಟ್ಟಿಮನಿ ಅವರು ತಮ್ಮ ಹರಿತವಾದ ಬರವಣಿಗೆಯಿಂದಾಗಿ ಸಾಹಿತ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸಾಹಿತಿ ಎಂದು ಗುರುತಿಸಿಕೊಂಡಿದ್ದರು ಎಂದರು.
ಕಟ್ಟಿಮನಿ ಅವರು ರಚಿಸಿರುವ ಸ್ವಾತಂತ್ರ್ಯದೆಡೆಗೆ, ಮಾಡಿ ಮಡಿದವರು, ಜ್ವಾಲಾಮುಖಿಯ ಮೇಲೆ, ಜರತಾರಿ ಜಗದ್ಗುರು, ಖಾನಾವಳಿ ನೀಲಾ ಸೇರಿದಂತೆ ಅವರು ರಚಿಸಿರುವ ಹಲವಾರು ಕಾದಂಬರಿಗಳಲ್ಲಿ ಸಾಮಾಜಿಕ ಕಳಕಳಿ, ವೈಚಾರಿಕತೆ, ದಬ್ಬಾಳಿಕೆ, ದುರಾಡಳಿತದ ವಿರುದ್ಧವಾದ ನಡೆ ಇತ್ತು ಎಂದರು.
ಅಧ್ಯಕ್ಷತೆವಹಿಸಿದ್ದ ಪ್ರೊ. ಶಿವಕುಮಾರ ಕೋಡಿಹಾಳ ಅವರು ಮಾತನಾಡಿ ಬಸವರಾಜ ಕಟ್ಟಿಮನಿ ಅವರ ಕಥೆ, ಕಾದಂಬರಿಗಳನ್ನು ಓದುವುದರಿಂದ ಸಮಾಜದಲ್ಲಿ ಬದಲಾವಣೆಯನ್ನು ತರಲು ಸಾಧ್ಯ ಎಂದರು.
ಚೈತನ್ಯ ಕೋ.ಆಪ್ ಸೊಸೈಟಿ ಅಧ್ಯಕ್ಷ ಟಿ.ಬಿ. ಕೆಂಚರಡ್ಡಿ ಅತಿಥಿಯಾಗಿ ಮಾತನಾಡಿದರು.
ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಪ್ರಾಸ್ತಾವಿಕ ಮಾತನಾಡಿದರು.
ಸಾಹಿತಿ, ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮಯೂರಿ ಪ್ರಾರ್ಥಿಸಿಸಿದರು, ಚಂದ್ರಕಲಾ ಜಕ್ಕನ್ನವರ ನಿರೂಪಿಸಿದರು.