ರಾಮದುರ್ಗ: ಅಖಂಡ ಕರ್ನಾಟಕದ ಅಭಿವೃದ್ದಿಯೇ ನಮ್ಮ ಕನಸ್ಸಾಗಿದ್ದು, ಆ ನಿಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ೧೩ ಜಿಲ್ಲೆಗಳಲ್ಲಿ ಬಹು ಸಂಖ್ಯೆಯಲ್ಲಿರುವ ರೆಡ್ಡಿ ಜನಾಂಗವು ಸಂಘಟಿತರಾಗಿ ಅಧಿಕಾರ ಪಡೆಯುವ ನಿಟ್ಟಿನಲ್ಲಿ ಸಂಘಟಿತ ಹೋರಾಟ ನಡೆಸಲಾಗುತ್ತಿದೆ ಎಂದು ಮಾಜಿ ಸಚಿವ ಹಾಗೂ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಸಂಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.

ಪಟ್ಟಣದ ಹಿರೇರಡ್ಡಿ ಆಯಿಲ್ ಮಿಲ್ ಆವರಣದಲ್ಲಿ ರಾಮದುರ್ಗ ತಾಲೂಕಾ ರಡ್ಡಿ ಸಮಾಜದಿಂದ ಹಮ್ಮಿಕೊಂಡ ಮಹಾಯೋಗಿ ವೇಮನರ ೬೧೧ ನೇ ಜಯಂತ್ಯೋತ್ಸವ ಹಾಗೂ ಧಾರ್ಮಿಕ ಚಿಂತನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದ ಏಕೀಕರಣಕ್ಕಾಗಿ ಸಾಕಷ್ಟು ಮಹನೀಯರು ಹೋರಾಟದ ನಡೆಸಿರುದವನ್ನು ನಾವೇಲ್ಲ ಮರೆಯುವಂತಿಲ್ಲ. ರಾಜ್ಯ ವಿಭಜನೆಯ ಕೂಗು ನಮ್ಮಿಂದ ಹೋಗುವುದು ಸೂಕ್ತವಲ್ಲ. ನಮ್ಮದೆನಿದ್ದರು ಅಖಂಡ ಕರ್ನಾಟಕ ಅಭಿವೃದ್ದಿಯೇ ಮೂಲವಾಗಬೇಕು ಎಂದರು.
ಸಮಗ್ರ ಕರ್ನಾಟಕ ಅಭಿವೃದ್ದಿಯ ಚಿಂತನೆಯನ್ನಿಟ್ಟುಕೊಂಡು ಈ ಬಾರಿಯ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮೂಲಕ ರಾಜ್ಯದ ಅಧಿಕಾರ ಪಡೆಯುವಲ್ಲಿ ಅಥವಾ ಅಧಿಕಾರ ನಡೆಸುವವರನ್ನು ಕೈಯಲ್ಲಿ ಹಿಡಿದುಕೊಟ್ಟುವ ಎಲ್ಲ ಪ್ರಯತ್ನಗಳು ನಡೆಯುತ್ತಿದ್ದು, ಮೇ ೨೩ ರ ನಂತರ ಎಲ್ಲವು ಸ್ಪಷ್ಟವಾಗಲಿದೆ ಎಂದು ಹೇಳಿದರು.
ಬಜೆಟ್‌ನ ಪ್ರತಿಶತ ೭೦ರಷ್ಟು ಹಣವನ್ನು ಬೆಂಗಳೂರು ಭಾಗದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ. ಬಜೆಟ್‌ನಲ್ಲಿ ಎಲ್ಲ ಜಿಲ್ಲೆಗಳಿಗೂ ಸಮಾನ ಅನುದಾನ ಬಿಡುಗಡೆಗೆ ಒತ್ತಾಯ ಮಾಡಬೇಕಿದೆ. ಆ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಎಲ್ಲ ಶಾಸಕರು ಒತ್ತಾಯಿಸಬೇಕಿದೆ. ಸಮಗ್ರ ಕರ್ನಾಟಕದ ಪರಿಕಲ್ಪನೆಯಲ್ಲಿ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷವು ಅನುದಾನ ವಿಂಗಡನೆಗೆ ಮುಂದಾಗಲಿದೆ ಎಂದು ಹೇಳಿದರು. ಇನ್ನೂ ಕಲ್ಯಾಣ ಕರ್ನಾಟಕದ ೧೩ ಜಿಲ್ಲೆಗಳಲ್ಲಿ ಬಹುಸಂಖ್ಯೆಯಲ್ಲಿರುವ ರೆಡ್ಡಿ ಜನಾಂಗದ ನಾವು ಅಧಿಕಾರ ಹಿಡಿದಿಟ್ಟುಕೊಳ್ಳಲು ಅಸಾಧ್ಯವಾದ ಕೆಲಸವಲ್ಲ. ಈ ಭಾಗದ ಪ್ರತಿಯೊಂದು ಹಳ್ಳಿಯಲ್ಲಿ ಸಂಘಟನೆ ಮಾಡುವ ಮೂಲಕ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷವು ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ನೂರಾರು ಏಕರೆ ಭೂಮಿವುಳ್ಳವರಾಗಿದ್ದ ರಡ್ಡಿ ಸಮುದಾಯ ಸಾಕಷ್ಟು ಕುಟುಂಬಗಳಿಗೆ ಆಸರೆ ನೀಡಿದೆ. ಕೃಷಿಯನ್ನೆ ಮೂಲವಾಗಿಸಿಕೊಂಡು ಬಂದು ಈಗ ಹಿಂದೆಟ್ಟು ಹಾಕುತ್ತಿದೆ. ಮತ್ತೇ ರಡ್ಡಿ ಸಮಾಜದ ಬಾಂಧವರು ಒಕ್ಕಲುತನಕ್ಕೆ ಪ್ರಾಧ್ಯನ್ಯತೆ ನೀಡುವಲ್ಲಿ ಮುಂದಾಗಬೇಕು. ಅದರೊಟ್ಟಿ ಗೆ ತಮ್ಮ ಮಕ್ಕಳಿಗೂ ಉನ್ನತ ಶಿಕ್ಷಣ ನೀಡುವತ್ತ ಗಮನ ಹರಿಸಬೇಕು ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಎರೆಹೊಸಳ್ಳಿ ರಡ್ಡಿ ಗುರುಪೀಠದ ಶ್ರೀ ವೇಮನಾನಂದ ಸ್ವಾಮೀಜಿ ಮಾತನಾಡಿ, ವೇಮನ ಹಾಗೂ ಹೇಮರಡ್ಡಿ ಮಲ್ಲಮ್ಮನ ತತ್ವ ಆದರ್ಶಗಳು ಕೇವಲ ರೆಡ್ಡಿ ಸಮಾಜಕ್ಕೆ ಮೀಸಲಾಗಿಲ್ಲ. ಅವುಗಳನ್ನು ಬಿತ್ತರಿಸಲು ರಡ್ಡಿ ಸಮಾಜದವರು ಯತ್ನಿಸಬೇಕು. ಮಹಾತ್ಮರ ತತ್ವ ಆದರ್ಶಗಳು ಎಲ್ಲರಲ್ಲೂ ಅಳವಡಿಕೆಯಾಗಬೇಕು. ರಡ್ಡಿ ಸಮಾಜ ಸಂಘಟಿತರಾಗಬೇಕದಾ ಅವಶ್ಯಕತೆ ಇದೆ ಎಂದು ಹೇಳಿದರು.
ಕಲ್ಬುರ್ಗಿಯ ಸಾಹಿತಿ ಮಹಿಪಾಲರೆಡ್ಡಿ ಸೇಡಂ ಉಪನ್ಯಾಸ ನೀಡಿದರು. ಮಾಜಿ ಶಾಸಕ ಆರ್.ವಿ. ಪಾಟೀಲ, ಕಾಂಗ್ರೆಸ್ ಮುಖಂಡ ಪ್ರದೀಪ ಪಟ್ಟಣ ಮಾತನಾಡಿದರು.
ಗುರುದೇವ ಆತ್ಮಾನಂದ ಮಠದ ಶಿವಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ರಡ್ಡಿ ಸಮಾಜದ ಅಧ್ಯಕ್ಷ ಜ್ಞಾನೇಶ್ವರ ಮೇಲಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಡಾ| ಆರ್.ಎ. ಕಣಬೂರ, ಚನ್ನಬಸವರಾಜ ಹಿರೇರಡ್ಡಿ, ಕೃಷ್ಣಾ ಮುಮ್ಮರಡ್ಡಿ, ರಾಜೇಂದ್ರ ಪಾಟೀಲ, ಡಾ| ಐ.ಎಸ್. ಪಾಟೀಲ, ಗೀತಾ ಕೌಲಗಿ, ಮಂಜುಳಾ ದೇವರಡ್ಡಿ, ರಮೇಶ ಅಣ್ಣಿಗೇರಿ ಸೇರಿದಂತೆ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು. ಡಾ| ಕೆ.ವಿ. ಪಾಟೀಲ ಸ್ವಾಗತಿಸಿದರು. ಮಲ್ಲಿಕಾರ್ಜುನರಡ್ಡಿ ಗೊಂದಿ ಪ್ರಾಸ್ತಾವಿಕ ಮಾತನಾಡಿದರು. ಅಶೋಕ ಬೂದಿ ಹಾಗೂ ಅನುಸುಯಾ ಬಿರಾದಾರ ನಿರೂಪಿಸಿದರು. ಸುರೇಶ ಅಣ್ಣಿಗೇರಿ ವಂದಿಸಿದರು.
ಭವ್ಯ ಮೆರವಣೆಗೆ:
ಜಯಂತ್ಯೋತ್ಸವ ಅಂಗವಾಗಿ ಪಟ್ಟಣದ ವೆಂಕಟೇಶ್ವರ ದೇವಸ್ಥಾನದಿಂದ ಹಮ್ಮಿಕೊಂಡ ಮೆರವಣೆಗೆಗೆ ಶಾಸಕ ಮಹಾದೇವಪ್ಪ ಯಾದವಾಡ ಚಾಲನೆ ನೀಡಿದರು. ವಿವಿಧ ಕಲಾ ವಾಧ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವೇದಿಕೆ ಬಂದು ತಲುಪಿತು.
IN MUDALGI Latest Kannada News