ರೈತ ಕಾರ್ಮಿಕರಿಂದಲೇ ಗೋದಾವರಿ ಸಕ್ಕರೆ ಕಾರ್ಖಾನೆಯ ಸುವರ್ಣ ಮಹೋತ್ಸವ
ಮೂಡಲಗಿ:: ಕಳೆದ 50 ವರ್ರ್ಷಗಳಿಂದ ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ರೈತರ ಬಾಳಿಗೆ ಬೆಳಕಾಗಿ ಸಾವಿರಾರು ಜನರಿಗೆ ಉದ್ಯೋಗ ದೊರಕಿಸಿ, ಲಕ್ಷಾಂತರ ಜನ ಕೂಲಿಕಾರ್ಮಿಕರಿಗೆ ಜೀವನಾಧಾರವಾಗಿರುವ ಸೈದಾಪುರ ಗ್ರಾಮದ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಅ. 9ರ ಭಾನುವಾರ ರೈತರು, ಕಾರ್ಮಿಕರು ಮತ್ತು ಅಧಿಕಾರಿ ವರ್ಗದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಖಾನೆಯ ಡಿಸ್ಟಿಲರಿ ವಿಭಾಗದ ಕಾರ್ಮಿಕ ಸಂಘದ ಅಧ್ಯಕ್ಷ ಬಸವರಾಜ ಭದ್ರಶೆಟ್ಟಿ ಹೇಳಿದರು.
ಸಮೀರವಾಡಿಯ ಗೋದಾವರಿ ಬಯೋ ರಿಫೈನರೀಸ್ ಲಿಮಿಟೆಡ್‍ನ ಅತಿಥಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಖಾನೆ ಸುವರ್ಣ ಮಹೋತ್ಸವದ ಆಮಂತ್ರಣ ನೀಡಿ ಮಾತನಾಡಿದರು.
ಭಾನುವಾರ ಬೆಳಗ್ಗೆ 9 ಗಂಟೆಗೆ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆ ಕಾರ್ಖಾನೆ ಮಾಲೀಕರಾದ ಸಮೀರಭಾಯಿ ಸೋಮೈಯಾ ವಹಿಸಲಿದ್ದಾರೆ. ಇಂಚಲ ಸಾಧು ಸಂಸ್ಥಾನ ಮಠದ ಶಿವಾನಂದ ಭಾರತಿ ಶ್ರೀ, ಸುಣಧೋಳಿ ಜಡಿಸಿದ್ದೇಶ್ವರ ಮಠದ ಶಿವಾನಂದಶ್ರೀ ಸಾನಿಧ್ಯ ವಹಿಸಲಿದ್ದಾರೆ. ಚೇರಮನ್ ಸಮೀರಭಾಯಿ ಸೋಮೈಯಾ ಅವರನ್ನು ಸೈದಾಪುರ್ ಕ್ರಾಸ್‍ನಿಂದ ಕಾರ್ಖಾನೆವರೆಗೆ ಕುದುರೆ ರಥ ಹಾಗೂ ಆನೆಗಳ ಮೇಲೆ ಭವ್ಯ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಗುವುದು ಎಂದರು.
ಕಬ್ಬು ಬೆಳೆಗಾರ ಸಂಘದ ಕಾರ್ಯದರ್ಶಿ ರಂಗನಗೌಡ ಪಾಟೀಲ, ಮಜದೂರ್ ಯೂನಿಯನ್ ಅಧ್ಯಕ್ಷ ಬಸವರಾಜ ಪೂಜಾರಿ ಮಾತನಾಡಿದರು. ಡಿಸ್ಟಿಲರಿ ಕಾರ್ಮಿಕರ ಅಧ್ಯಕ್ಷ ಬಸವರಾಜ ಭದ್ರಶೆಟ್ಟಿ, ಕಾರ್ಯದರ್ಶಿ ಸಂಜೀವ ಕುಳ್ಳೊಳ್ಳಿ, ಸಚಿನ್ ವಾಘಮೋರೆ, ಮಹಾಲಿಂಗ ಭದ್ರಶೆಟ್ಟಿ, ಈರಪ್ಪ ಪರಮಾನಟ್ಟಿ, ಬಸಪ್ಪ ಉದಗಟ್ಟಿ, ಲಕ್ಷ್ಮಣ ಉಳ್ಳಾಗಡ್ಡಿ, ಬಸವರಾಜ ಉಳ್ಳಾಗಡ್ಡಿ ್ಲ ಇದ್ದರು.
ಹೋಮ ಪೂಜೆಯೊಂದಿಗೆ ಬಾಯ್ಲರ್‍ಗೆ ಉದ್ದೀಪನ:
ಇದಕ್ಕೂ ಮುನ್ನ ಕಾರ್ಖಾನೆಯ ಬಾಯ್ಲರ್ ಬಳಿ ಶಾಸ್ತ್ರೋಕ್ತವಾಗಿ ಮಹಾಗಣಪತಿ ಪೂಜೆ ಹಾಗೂ ನವಗೃಹ ಹೋಮ ನೆರವೇರಿಸಿ, ನಂತರ ರೈತರು, ಪತ್ರಕರ್ತರು ಹಾಗೂ ಕಾರ್ಮಿಕರಿಂದ ಬಾಯ್ಲರ್‍ಗೆ ಜ್ವಾಲೆಯ ಉದ್ದೀಪನಗೊಳಿಸಲಾಯಿತು. ಅಧಿಕಾರಿ ಮತ್ತು ಕಾರ್ಮಿಕರ ಪರಿವಾರದ ಮಹಿಳೆಯರು ಕೂಡ ಹೋಮಪೂಜೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲರಿಗೂ ಸಿಹಿ ವಿತರಿಸಿ ಅಲ್ಪೋಪಹಾರ ವ್ಯವಸ್ಥೆ ಮಾಡಲಾಯಿತು. ಕಾರ್ಖಾನೆಯ ನಿರ್ದೇಶಕ ಬಾಲಚಂದ್ರ ಭಕ್ಷಿಯೊಂದಿಗೆ ಅಧಿಕಾರಿ ವರ್ಗ, ಕಬ್ಬು ಬೆಳೆಗಾರರು, ಕಾರ್ಮಿಕ ಸಂಘದ ಪದಾಧಿಕಾರಿಗಳು ಹಾಗೂ ಸುತ್ತಲಿನ ಗ್ರಾಮಗಳ ರೈತ ಮುಖಂಡರು ಭಾಗವಹಿಸಿದ್ದರು.
ಮೂಡಲಗಿ ಸಮೀಪದ ಸಮೀರವಾಡಿಯ ಕಾರ್ಖಾನೆಯ ಆವರಣದಲ್ಲಿ ಮಹಾಗಣಪತಿ ಪೂಜೆ ಹಾಗೂ ನವಗೃಹ ಹೋಮ ನೆರವೇರಿಸಲಾಯಿತು.