ಭಾವೈಕ್ಯತೆ ಬಿಂಬಿಸುವ ಸಾವಳಗಿಯ ದಸರಾ ಉತ್ಸವ ಸೋಮವಾರದಿಂದ ಪ್ರಾರಂಭ
ಸಾವಳಗಿ: ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರಾಗಿರುವ ಗೋಕಾಕ ತಾಲ್ಲೂಕಿನ ಸಾವಳಗಿಯ ಜಗದ್ಗುರು ಪೀಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸೆ. 26ರಿಂದ ಅ.5ರ ವರೆಗೆ ದಸರಾ ಉತ್ಸವವು ಸಿಂಹಾಸನಾಧೀಶ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸನ್ನಿಧಿಯಲ್ಲಿ ಸಂಭ್ರಮದಿಂದ ಜರುಗಲಿವೆ.
ಅ.26ರಂದು ಬೆಳಗ್ಗೆ ಕೃರ್ತೃ ಗದ್ದುಗೆಗೆ ವಿಶೇಷ ಅಲಂಕಾರದೊಂದಿಗೆ ಪೂಜೆ, ರುದ್ರಾಭಿಷೇಕ ಜರುಗಲಿದೆ.
ಪುರಾಣ: ಸೆ.26ರಿಂದ ಪ್ರತಿ ನಿತ್ಯ ರಾತ್ರಿ 8.30ರಿಂದ ಶ್ರಿ ದೇವಿ ಮಹಾತ್ಮೆ ಪುರಾಣ ಪ್ರವಚನವನ್ನು ಕಾರಡಗಿಯ ರೇವಣಸಿದ್ದಯ್ಯ ಹಿರೇಮಠ ಶಾಸ್ತ್ರೀಗಳು ಹೇಳುವರು.
ಸಾಹಿತ್ಯ-ಸಂಸ್ಕøತಿ ಸೌರಭ: ಸೆ. 26ರಿಂದ ಪ್ರತಿ ದಿನ ಸಂಜೆ 7.30ಕ್ಕೆ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಶ್ರೀಗಳ ಮಹಾಸನ್ನಿಧಿಯಲ್ಲಿ ಕಲೆ, ಸಾಹಿತ್ಯ, ಶಿಕ್ಷಣ, ಜಾನಪದ, ಕೃಷಿ, ವೈದ್ಯಕೀಯ ವಿವಿಧ ವಿಷಯಗಳಲ್ಲಿ ಉಪನ್ಯಾಸ, ನೃತ್ಯ, ಕಲಾ ಪ್ರದರ್ಶನಗಳು ಜರುಗಲಿವೆ.
ಸೀಮೋಲ್ಲಂಘನ: ಅ. 5ರಂದು ಸಂಜೆ 5ಕ್ಕೆ ವಿಜಯದಶಮಿಯ ಸೀಮೋಲ್ಲಂಘನ ನಡೆಯುವುದು. ಅಂದು ಶ್ರೀಪೀಠದಿಂದ ಸನ್ನಿಧಿಯವರು ಸಕಲ ರಾಜಮರ್ಯಾದೆಯಲ್ಲಿ ಅಶ್ವಾರೂಢರಾಗಿ ಬನ್ನಿಮಂಟಪಕ್ಕೆ ದಯಮಾಡಿಸಿ ಸೀಮೋಲ್ಲಂಘನೆಯನ್ನು ಮುಗಿಸಿ ಮರಳಿ ಶ್ರೀಮಠಕ್ಕೆ ಆಗಮಿಸಿರುವರು.
ಅಂದು ಸಂಜೆ 7.30ಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕøರು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ. ಚಂದ್ರಶೇಖರ ಕಂಬಾರ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಾಧಕರಿಗೆ ಸನ್ಮಾನ ಇರುವುದು ಎಂದು ಸಂಚಾಲಕ ಬಾಲಶೇಖರ ಬಂದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಬಾಕ್ಸ್ ಸುದ್ದಿ..
ಭಾವೈಕ್ಯತೆಯನ್ನು ಬಿಂಬಿಸುವ ಮಠ : ದೈವಾಂಶ ಪುರುಷರು ಆಗಿರುವ ಸಾವಳಗಿಯ ಜಗದ್ಗುರುಶಿವಲಿಂಗೇಶ್ವರರು ಕ್ರಿ.ಶ. 1645ರಿಂದ ಕ್ರಿ.ಶ. 1748ರ ಅವಧಿಯಲ್ಲಿ ಹಲವಾರು ಪವಾಡುಗಳ ಮೂಲಕ ಭಕ್ತರ ಹೃದಯದಲ್ಲಿ ನೆಲೆಸಿರುವರು. ಕಲಬುರ್ಗಿಯ ಹಿರೇಸಾವಳಗಿ ಬಳಿಯ ಕೊಳ್ಳೂರು ಗ್ರಾಮದಲ್ಲಿ ಜನಿಸಿ ತಮ್ಮ ದೈವತ್ವ ಸಾಕ್ಷಾತ್ಕಾರದ ಮೂಲಕ ಗೋಕಾಕ ತಾಲ್ಲೂಕಿನ ಸಾವಳಗಿಯಲ್ಲಿ ನೆಲೆಸಿದರು. ಇವರ ತಪಸ್ಸಿನ ಪ್ರಭಾವವು ಕಲಬುರ್ಗಿಯ ಬಾದಷಹ ಸುಲ್ತಾನ್ ರೋಜ್ ಬಹದ್ದೂರನ ಗುರು ಬಂದೇನವಾಜ್ವಲಿಯವರ ಮೇಲೆ ವಿಷೇಶವಾಗಿ ಬೀರಿತ್ತು. ಮುಸಲ್ಮಾನ್ ಗುರು ಖಾಜಾ ಬಂದೇನವಾಜ್ರು ವೀರಶೈವ ಗುರು ಶಿವಲಿಂಗೇಶ್ವರರ ಸಖ್ಯವನ್ನು ಬೆಳೆಸಿರುವ ಪ್ರತೀಕವಾಗಿ ಸಾವಳಗಿಯ ಶ್ರೀಪೀಠವು ಇಂದಿಗೂ ಭಾವೈಕ್ಯತೆಯನ್ನು ಬಿಂಬಿಸುವ ಜಾಗೃತ ಸ್ಥಳವಾಗಿದೆ. ಶಿವಲಿಂಗೇಶ್ವರರು ಲೋಕ ಕಲ್ಯಾಣಕ್ಕಾಗಿ ಸಂಚರಿಸುವಾಗ ಅವರು ವಾಸ್ತವ್ಯ ಮಾಡಿದ ಸ್ಥಳಗಳಲ್ಲಿ ಶಿವಲಿಂಗೇಶ್ವರರ ಮಠಗಳು ಸ್ಥಾಪನೆಯಾಗಿದ್ದು, ನಾಡಿನಾದ್ಯಂತ ಶಿವಲಿಂಗೇಶ್ವರರ ಸಾವಿರಾರು ಮಠ, ದೇವಸ್ಥಾನಗಳು ಸ್ಥಾಪಿತವಾಗಿವೆ. ಸದ್ಯ ಸಾವಳಗಿಯ ಮೂಲ ಪೀಠದಲ್ಲಿ ನಿರಂಜನ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು 15ನೇ ಪೀಠಾಧಿಪತಿಗಳಾಗಿ ಭಕ್ತರ ಹೃದಯದಲ್ಲಿ ನೆಲೆಸಿದ್ದಾರೆ. ಪ್ರತಿ ವರ್ಷ ಜಾತ್ರೆ, ದಸರಾ ಉತ್ಸವ, ಗುರುಸ್ಮರಣೆ, ಕಾರ್ತಿಕೋತ್ಸವ, ಶಿವರಾತ್ರಿ, ಶ್ರಾವಣ ಮತ್ತು ಪ್ರತಿ ಅಮವಾಸ್ಯೆಗೆ ವಿಶೇಷ ಕಾರ್ಯಕ್ರಮಗಳು ಮಠದಲ್ಲಿ ಭಕ್ತಿಭಾವದಲ್ಲಿ ನಡೆದುಕೊಂಡು ಬಂದಿದ್ದು, ದೇಶದ ವಿವಿಧೆಡೆಯಿಂದ ಭಕ್ತರು ಕಾರ್ಯಕ್ರಮಗಳಿಗೆ ಆಗಮಿಸುತ್ತಿರುವುದು ಸಾವಳಗಿ ಮಠದ ವಿಶೇಷವಾಗಿದೆ.