ಬೆಟಗೇರಿ ಗ್ರಾಮದಲ್ಲಿ ಮಾ.27 ರಂದು ಸಂಜೀವಿನಿ ಮಾಸಿಕ ಸಂತೆ
* ಸ್ಥಳೀಯವಾಗಿ ಉತ್ಪಾದಿಸಿದ ಉತ್ಪನ್ನಗಳು * ವಸ್ತು ಪ್ರದರ್ಶನ ಮತ್ತು ಮಾರಾಟ
ಬೆಟಗೇರಿ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಕೌಸಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಬೆಳಗಾವಿ ಜಿಲ್ಲಾ ಪಂಚಾಯತ, ಗೋಕಾಕ ತಾಲೂಕಾ ಪಂಚಾಯತ ಹಾಗೂ ಬೆಟಗೇರಿ ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಇದೇ ಮಾ.27ರಂದು ಸಂಜೀವಿನಿ ಮಾಸಿಕ ಸಂತೆ ನಡೆಯಲಿದೆ.
“ಸಂಜೀವಿನಿ”ಎನ್‍ಆರ್‍ಎಲ್‍ಎಮ್ ಯೋಜನೆಯಡಿ ರೂಪಗೊಂಡ ಮಾಸಿಕ ಸಂತೆ ಕಾರ್ಯಕ್ರಮವು ಗ್ರಾಮ ಪಂಚಾಯತಿ ಮಟ್ಟದ ಮಹಿಳಾ ಒಕ್ಕೂಟಗಳಲ್ಲಿ ಕಾರ್ಯನಿರ್ವಹಿಸುವತ್ತಿರುವ ಸ್ವಸಹಾಯ ಸಂಘದ ಮಹಿಳೆಯರು ಸ್ಥಳೀಯವಾಗಿ ಉತ್ಪಾದಿಸುವ ವಿವಿಧ ಉತ್ಪನ್ನಗಳಿಗೆ ಯಾವುದೇ ಮದ್ಯವರ್ತಿಗಳಿಗೆ ಕಮಿಷನ್ ಪಾವತಿಸದೆ, ನೇರವಾಗಿ ಗ್ರಾಹಕರಿಗೆ ತಲುಪಿಸಲು ಸೂಕ್ತ ಮಾರುಕಟ್ಟೆ, ಪ್ರದರ್ಶನ ಮಾಡಲು ಉತ್ತಮ ಅವಕಾಶ ಕಲ್ಪಿಸಿಕೊಟ್ಟಿರುತ್ತದೆ. ಬೆಳಗಾವಿ ಜಿಲ್ಲೆಯಲ್ಲಿ ಸ್ವಸಹಾಯ ಸಂಘಗಳು ಸ್ಥಳೀಯವಾಗಿ ಉತ್ಪಾದಿಸುವ ಉತ್ಪನ್ನಗಳಿಗೆ ಪ್ರತಿ ತಿಂಗಳು ಜಿಲ್ಲೆಯ ಎಲ್ಲಾ ತಾಲೂಕಾ ಹಾಗೂ ಗ್ರಾಮ ಮಟ್ಟದಲ್ಲಿ ಈ ಮಾಸಿಕ ಸಂತೆ ಆಯೋಜಿಸಲಾಗುತ್ತಿದೆ ಎಂದು ಗೋಕಾಕ ತಾಲೂಕಾ ಪಂಚಾಯತ ಸಹಯೋಗದ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಯ ವಲಯ ಮೇಲ್ವಿಚಾರಕ ಅಶೋಕ ಪೂಜೇರ ತಿಳಿಸಿದ್ದಾರೆ.