ಮೂಡಲಗಿ: ‘ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಕಲಿಕಾ ಹಬ್ಬವು ಸಹಕಾರಿಯಾಗಿದ್ದು, ಮಕ್ಕಳು ಕಲಿಕೆಯನ್ನು ಹಬ್ಬವನ್ನಾಗಿ ಸಂಭ್ರಮಿಸುವ ಅವಕಾಶವಾಗಿದೆ’ ಎಂದು ಚಿಕ್ಕೋಡಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕರ ಮೋಹಮನಕುಮಾರ ಹಂಚಾಟಿ ಹೇಳಿದರು.
ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಬೆಳಗಾವಿ ಜಿಲ್ಲಾ ಪಂಚಾಯ್ತಿ, ಚಿಕ್ಕೋಡಿ ಶಾಲಾ ಶಿಕ್ಷಣ ಹಾಗೂ ಸಾಕ್ಷತಾ ಇಲಾಖೆ, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಮೂರು ದಿನಗಲ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಮಕ್ಕಳ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು ಗುಣಾತ್ಮಕ ಶಿಕ್ಷಣದ ಅನುಷ್ಠಾನ ಹಾಗೂ ಶೈಕ್ಷಣಿಕ ಕಾರ್ಯಚಟುವಟಿಕೆಗಳ ನ್ನು ಗಟ್ಟಿಗೊಳಿಸಲು ಇಂಥ ಹಬ್ಬಗಳನ್ನು ಆಚರಿಸಲಾಗುತ್ತಿದೆ ಎಂದರು.
ಕೋವಿಡ್ 19ರಲ್ಲಿ ಆಗಿರುವ ಶೈಕ್ಷಣಿಕ ಕೊರತೆಯನ್ನು ನೀಗಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮದ ಆಯೋಜಿಸಿತ್ತು, ಅದರ ಮುಂದಿನ ಹಂತವು ಕಲಿಕಾ ಹಬ್ಬವಾಗಿದ್ದು, ಇದು ಮಕ್ಕಳನ್ನು ಶೈಕ್ಷಣಿಕವಾಗಿ ಪರಿಪೂರ್ಣತೆಯತ್ತ ತರುವುದಾಗಿದೆ ಎಂದರು.
ಮೂಡಲಗಿ ವಲಯದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮದ ಆಯೋಜನೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಹಕಾರ ಅಮೂಲ್ಯವಾಗಿದೆ. ಮೂರು ದಿನಗಳ ಕಲಿಕಾ ಹಬ್ಬವು ನಾಡ ಹಬ್ಬದಂತೆ ಆಚರಿಸುತ್ತಿರುವುದು ಶ್ಲಾಘನೀಯವಾಗಿದ ಎಂದರು.
ಮುಖ್ಯ ಅತಿಥಿ ಯುವ ಮುಖಂಡ ಸವೋತ್ತಮ ಜಾರಕಿಹೊಳಿ ಮಾತನಾಡಿ ಜಿಲ್ಲಾ ಮಟ್ಟದ ಕಲಿಕಾ ಹಬ್ಬವನ್ನು ಆಯೋಜನೆಯ ಆತಿಥ್ಯವನ್ನು ಮೂಡಲಗಿ ವಲಯಕ್ಕೆ ದೊರೆತಿದ್ದು ಹೆಮ್ಮೆಯ ಸಂಗತಿಯಾಗಿದೆ. ಕಲಿಕಾ ಹಬ್ಬವು ಜ್ಞಾನ, ನೈತಿಕ ಮೌಲ್ಯ, ಸಂವಹನ ಹಾಗು ಮಕ್ಕಳಲ್ಲಿ ಸೌಹಾರ್ದತೆಯನ್ನು ಬೆಳೆಸುತ್ತದೆ ಎಂದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತಿದ್ದು, ಮೂಡಲಗಿ ವಲಯವನ್ನು ಶೈಕ್ಷಣಿಕವಾಗಿ ಬೆಳೆಸುವಲ್ಲಿ ಅವರು ವಿಶೇಷ ಕಾಳಜಿಯು ಶ್ಲಾಘೀಸುವಂತದ್ದು ಎಂದರು.
ಸಮಾರಂಭದ ಸಾನ್ನಿಧ್ಯವನ್ನು ಹುಣಶ್ಯಾಳ ಪಿಜಿ ಸಿದ್ಧಲಿಂಗ ಕೈವಲ್ಯಾಶ್ರಮದ ನಿಜಗುಣ ದೇವರು ವಹಿಸಿದರು. ಅಧ್ಯಕ್ಷತೆಯನ್ನು ಹುಣಶ್ಯಾಳ ಪಿಜಿ ಗ್ರಾ.ಪಂ ಅಧ್ಯಕ್ಷ ಸುನೀಲ ಪಾಶ್ಚಾಪೂರ ವಹಿಸಿದರು.
ಬಿಇಒ ಅಜಿತ್ ಮನ್ನಿಕೇರಿ ಪ್ರಾಸ್ತಾವಿಕ ಮಾತನಾಡಿ ಫೆ. 8ರಿಂದ 10ರ ವರೆಗೆ ಮೂರು ದಿನಗಳ ವರೆಗೆ ಕಲಿಕಾ ಹಬ್ಬವು ಜರುಗುವುದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿಯ 160 ಗ್ರಾಮಗಳಿಂದ ವಿದ್ಯಾರ್ಧಿಗಳು ಭಾಗವಹಿಸಿದ್ದಾರೆ ಎಂದರು.
ವೇದಿಕೆಯಲ್ಲಿ ಚಿಕ್ಕೋಡಿ ಬಿಇಒ ಎ.ಸಿ.ಗಂಗಾಧರ, ಮೂಡಲಗಿ ಬಿಇಒ ಅಜೀತ ಮನ್ನಿಕೇರಿ, ಗೋಕಾಕ ಬಿಇಒ ಜಿ.ಬಿ.ಬಳಿಗಾರ, ಚಿಕ್ಕೋಡಿ ಇಒಎಂಎಂ ಶಾಲಾ ಶಿಕ್ಷಣ ಸಾಕ್ಷರತಾ ಅಧಿಕಾರಿ ಆರ್.ಡಿ.ತೇರದಾಳ, ಬಿ ಆರ್ ಸಿ ಅಧಿಕಾರಿ ರೇಖಾ ಆನಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಿಂಗಪ್ಪ ಕುರಬೇಟ, ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಜಿ.ಎಲ್.ಕೋಳಿ, ವಡೇರಹಟ್ಟಿ ಸಿಆರ್‍ಸಿ ಆನಂದ ಹಮನವರ, ಚಿಕ್ಕೋಡಿ ಶಿಕ್ಷಣ ಇಲಾಖೆಯ ಬಿ.ಎ.ಮೆಕನಮರಡಿ, ವ್ಹಿಎಸ್.ಕಾಂಬಳೆ, ಅನೀತಾ ಪಾಟೀಲ, ಮಮತಾ ಶಿಂಧೆ, ಎಸ್‍ಡಿಎಂಸಿ ಅಧ್ಯಕ್ಷ ಅರ್ಜುನ ನಾಯ್ಕ ಮತ್ತು ರಾಮನಾಯ್ಕ ನಾಯ್ಕ, ಬಸವರಾಜ ಕಾಡಾಪೂರ, ಶಬ್ಬೀರ ತಾಂಬಿಟಗಾರ, ಅಜೀತ ಪಾಟೀಲ, ಶಿಖಂದರಸಾಭ ನದಾಫ್, ಶಂಕರ ಇಂಚಲ,ಲಕ್ಕಪ್ಪ ಸುಂಕದ ಹಾಗೂ ಗ್ರಾಮದ ಗಣ್ಯರು, ಗ್ರಾಮಸ್ಥರು, ಶಿಕ್ಷಕರು ಮತ್ತಿತರರು ಉಪಸ್ಥಿತರಿದ್ದರು.