ಮೂಡಲಗಿ : ಹೆಣ್ಣು ಮಕ್ಕಳು ವಿರುದ್ಧ ನಡೆಯುವ ಶೋಷಣೆ, ಹೆಣ್ಣು ಭ್ರೂಣ ಹತ್ಯೆ, ಲೈಗಿಂಕ ಕಿರುಕುಳ ಅಂತಹ ಕೃತ್ಯಗಳ ತಡೆಗಟ್ಟಿ, ಹೆಣ್ಣು ಮಕ್ಕಳು ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿಯೊಂದು ಮನೆಯ ಹೆಣ್ಣು ಮಗುವಿನ ಹೆಸರಿನಲ್ಲಿ ಒಂದು ಸಸಿಗನ್ನು ನೆಟ್ಟುವಂತಾಗಬೇಕು ಎಂದು ದಿವಾಣಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಪಾಟೀಲ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಗಳ ಆಶ್ರಯದಲ್ಲಿ ಜರುಗಿದ, ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚಾರಣೆ ಅಂಗವಾಗಿ ಬೇಟಿ ಬಚಾವೋ ಬೇಟಿ ಪಢಾವೋ ಅಭಿಯಾನದ ನಿಮಿತ್ಯ ಹೆಣ್ಣು ಮಕ್ಕಳ ಹೆಸರಿನಲ್ಲಿ ಸಸಿ ನೆಟ್ಟು ಮಾತನಾಡಿದ ಅವರು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬುದು ಹಿಂದಿನಿಂದಲೂ ನಮ್ಮಲ್ಲಿ ಪ್ರಚಲಿತದಲ್ಲಿರುವ ಮಾತು. ಆದರೆ ಇದು ಮಾತಾಗಿಯೇ ಉಳಿಯಿತೇ ವಿನಃ ಅಕ್ಷರಶಃ ಅನುಷ್ಠಾನಲ್ಲಿ ಬರಲಿಲ್ಲ. ಕಳೆದ ಕೆಲವು ದಶಕರಗಳಿಗೆ ಹೋಲಿಸಿದಲ್ಲಿ ಹೆಣ್ಣು ಮಕ್ಕಳು ಈಗ ಸಾಕಷ್ಟು ಪ್ರಮಾಣದಲ್ಲಿ ಸುಶಿಕ್ಷಿರಾಗುತ್ತಿರುವರಾದರೂ ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಬೇಕಿದೆ ಎಂದರು.
ಹೆಣ್ಣು ಮಗುವಿನ ಸುರಕ್ಷತೆ ಮತ್ತು ಶಿಕ್ಷಣದ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕು. ಹೆಣ್ಣು ಭ್ರೂಣಹತ್ಯೆ, ವರದಕ್ಷಿಣೆ, ಬಾಲ್ಯವಿವಾಹ, ಅತ್ಯಾಚಾರ ಅದರಲ್ಲೂ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ, ಬಡತನ, ಅನಕ್ಷರತೆ, ಲಿಂಗತಾರತಮ್ಯ, ಮುಂತಾದ ಸಮಸ್ಯೆಗಳಿಂದ ಹೆಣ್ಣು ಬಳಲುತ್ತಿದ್ದಾಳೆ. ಇಂದಿನ ಆಧುನಿಕ ಯುಗದಲ್ಲೂ ಹೆಣ್ಣು ಮಗುವನ್ನು ಅಭದ್ರತೆ ಕಾಡುತ್ತಿದೆ ಎಂದರೆ ಸಮಾಜ ಇನ್ನೂ ಹಿಂದುಳಿದಿದೆ ಎಂದೇ ಅರ್ಥ. ಕಲಿತ ಹೆಣ್ಣೂ ಕೂಡ ಉದ್ಯೋಗದ ಸ್ಥಳದಲ್ಲಿ ದೌರ್ಜನ್ಯ ಅನುಭವಿಸುವ ಎಷ್ಟೋ ನಿದರ್ಶಗಳು ನಮ್ಮ ಮುಂದಿವೆ. ಈ ಎಲ್ಲ ತೊಡಕುಗಳನ್ನು ನಿವಾರಿಸಿ ಹೆಣ್ಣು ಮಕ್ಕಳಿಗೆ ಸುಭದ್ರತೆಯ ವಾತಾವರಣ ಕಲ್ಪಸುವ ಉದ್ದೇಶದಿಂದ ಸಾಕಷ್ಟು ಯೋಜನೆಗಳು ರೂಪಗೊಂಡಿವೆ ಎಂದರು.
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್ ಜಿ ಚಿನ್ನನವರ, ಬಿಇಒ ಅಜೀತ ಮನ್ನಿಕೇರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಲ್ಲಪ್ಪ ಗದಾಡಿ, ಸಂಘದ ಅಧ್ಯಕ್ಷ ಆರ್ ಆರ್ ಬಾಗೋಜಿ, ಪ್ರಧಾನ ಕಾರ್ಯದರ್ಶಿ ಎ ಎಸ್ ಕೌಜಲಗಿ, ಅಂಗನವಾಡಿ ಮೇಲ್ವಿಚಾರಕಿ ಕೆ ಎಸ್ ಪಡೆನ್ನವರ, ಯಮನಾ ತಳವಾರ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳು ಇದ್ದರು.