ಮೂಡಲಗಿ: ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಪುಣ್ಯಾರಣ್ಯ ಸಿದ್ಧ ಸಂಸ್ಥಾನಮಠದ ಜಾತ್ರೆಯು ಪೀಠಾಧಿಪತಿ ಗುರುಬಸವಲಿಂಗ ಸ್ವಾಮಿಗಳ ಸಾನಿಧ್ಯದಲ್ಲಿ ಮಾ. 29ರಿಂದ ಏ. 1ರ ವರೆಗೆ ಜರುಗಲಿದೆ.
ಮಾ. 29ರಂದು ಸಂಜೆ 6ಕ್ಕೆ ಹುಕ್ಕೇರಿಯ ವಿರಕ್ತಮಠದ ಶಿವಬಸವ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಶಿವಾನುಭವ ಕಾರ್ಯಕ್ರಮ ಇರುವುದು. ಪ್ರಜಾವಾಣಿ ಪತ್ರಿಕೆಯ ಬೆಳಗಾವಿ ಜಿಲ್ಲಾ ಹಿರಿಯ ವರದಿಗಾರ, ಸಾಹಿತಿ ಸಂತೋಷ ಚಿನಗುಡಿ ಅವರು ‘ವಚನ ಮತ್ತು ಪ್ರಮಾಣ ವಚನ: ಆಧುನಿಕ ಜೀವನ ಮತ್ತು ಅನುಷ್ಠಾನ” ಕುರಿತು ಉಪನ್ಯಾಸ ನೀಡುವರು.
ಮಾ. 30ರಂದು ಬೆಳಿಗ್ಗೆ 8ಕ್ಕೆ ಷಟ್‍ಸ್ಥಲ ಧ್ವಜಾರೋಹಣ ಹಾಗೂ ಯುಗಾದಿ ಪಾಡ್ಯೆ ಪಂಚಾಂಗ ಶ್ರವಣ. ಬೆಳಿಗ್ಗೆ 9ಕ್ಕೆ ಗುಡಗುಂಟಿಯ ಸದಾನಂದ ಶಿವಾಚಾರ್ಯರಿಂದ ಅಯ್ಯಾಚಾರ ದೀಕ್ಷಾ ಕಾರ್ಯಕ್ರಮ. ಮಧ್ಯಾಹ್ನ 12ಕ್ಕೆ ಪಾದ ಪೂಜೆ, ಮಹಾಪ್ರಸಾದ ಇರುವುದು. ಸಂಜೆ 6.30ಕ್ಕೆ ಡಂಬಳ ಗದಗದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನಿಧ್ಯ ಮತ್ತು ಬೆಳಗಾವಿಯ ಡಾ. ಅಲ್ಲಮಪ್ರಭು ಸ್ವಾಮೀಜಿಗಳ ಸಮ್ಮುಖದಲ್ಲಿ ಸನ್ಮಾನ ಕಾರ್ಯಕ್ರಮ ಇರುವುದು. ಮುಖ್ಯ ಅತಿಥಿಗಳಾಗಿ ಸಂಸದ ಜಗದೀಶ ಶೆಟ್ಟರ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭಾಗವಹಿಸುವರು. ರಾಜ್ಯಪ್ರಶಸ್ತಿ ಪುರಸ್ಕøತ ಆಶು ಕವಿ ಸಿದ್ದಪ್ಪ ಬಿದರಿ ಅವರಿಗೆ ಸನ್ಮಾನ ಇರುವುದು.
ಮಾ. 31ರಂದು ಬೆಳಿಗ್ಗೆ 6ಕ್ಕೆ ದುರದುಂಡೀಶ್ವರ ಗದ್ದುಗೆಗೆ ಮಹಾರುದ್ರಾಭಿಷೇಕ, ಬೆಳಿಗ್ಗೆ 11ಕ್ಕೆ ಪಲ್ಲಕ್ಕಿ ಉತ್ಸವ ಜರುಗಲಿದೆ. ಮಧ್ಯಾಹ್ನ 1ಕ್ಕೆ ಮಹಾಪ್ರಸಾದ ಇರುವುದು. ಸಂಜೆ 6ಕ್ಕೆ ಧರ್ಮ ಚಿಂತನ ಗೋಷ್ಠಿ ಇರುವುದು. ಕಡಕೋಳದ ಸಚ್ಛಿದಾನಂದ ಸ್ವಾಮೀಜಿ, ಹಂದಿಗುಂದ ಅಡಿ ಶಿವಾನಂದ ಸ್ವಾಮೀಜಿ, ಶೇಗುಣಶಿಯ ಡಾ. ಮಹಾಂತ ಸ್ವಾಮೀಜಿಯವರ ಸಾನ್ನಿಧ್ಯ ಇರುವುದು. ಮುಖ್ಯ ಅತಿಥಿಗಳಾಗಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಭಾಗವಹಿಸುವರು. ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಸನ್ಮಾನ ಇರುವುದು. ಮಠದ ಸದ್ಭಕ್ತರಿಗೆ ಸನ್ಮಾನ ಇರುವುದು. ರಾತ್ರಿ 10.30ಕ್ಕೆ ರಸಮಂಜರಿ ಇರುವುದು. ಏ. 1ರಂದು ಮಧ್ಯಾಹ್ನ 12ಕ್ಕೆ ಪಾದಪೂಜೆ, ಮಹಾಪ್ರಸಾದ ಮತ್ತು ಸಂಜೆ 5ಕ್ಕೆ ಜಂಗಿ ಕುಸ್ತಿ ಜರುಗುವವು ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.